ಹೆಣ್ಣು ಕೊಡಲಿಲ್ಲವೆಂದು ಚಾಕುವಿನಿಂದ ಚುಚ್ಚಿ ಕೊಲೆ, ಕೊಲೆಗಾರನಿಗೆ ಜೀವಾವಧಿ ಶಿಕ್ಷೆ

udp-8-court
Published on

ವಿಜಯಪುರ: ಮದುವೆ ಮಾಡಿಕೊಳ್ಳಲು ಹೆಣ್ಣು ಕೊಡಲಿಲ್ಲ ಎಂಬ ಕಾರಣಕ್ಕೆ ಯುವತಿಯನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದಾತನಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಇಲ್ಲಿನ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ಇಂಥದ್ದೊಂದು ತೀರ್ಪು ಪ್ರಕಟಿಸಿದ್ದು, ಇಂಡಿ ತಾಲೂಕಿನು ಬುಯ್ಯರ ಗ್ರಾಮದ ವಿಶ್ವೇಶ್ವರಯ್ಯ ಲೋಟಯ್ಯ ಹಿರೇಮಠ ಶಿಕ್ಷೆಗೆ ಗುರಿಯಾಗಿದ್ದಾರೆ. ಮೂಲತಃ ತಾಲೂಕಿನ ನಾರಾಯಣಪುರದವನಾದ ವಿಶ್ವೇಶ್ವರಯ್ಯ ದಾನಮ್ಮ ಎಂಬುಳವನ್ನು ಕೊಲೆ ಮಾಡಿದ್ದನು. ಈ ಬಗ್ಗೆ ಇಂಡಿ ಗ್ರಾಮೀಣ ಠಾಣೆಯಲ್ಲಿ 2021 ಆ.16ರಂದು ಪ್ರಕರಣ ದಾಖಲಾಗಿತ್ತು.

ಘಟನೆ ವಿವರ

ಬುಯ್ಯರದ ಶಿವರುದ್ರಯ್ಯ ಶಿವಲಿಂಗಯ್ಯ ಹಿರೇಮಠ ಈತನ ಅಕ್ಕ ಗುರುಲಿಂಗವ್ವ ತನ್ನ ಮಗ ವಿಶ್ವೇಶ್ವರಯ್ಯಗೆ ಹೆಣ್ಣು ಕೊಡುವಂತೆ ಕೇಳಿದ್ದಳು. ಮಗಳಾದ ದಾನಮ್ಮಳನ್ನು ವಿಶ್ವೇಶ್ವರಯ್ಯಗೆ ಮದುವೆ ಮಾಡಿಕೊಡಲು ಶಿವರುದ್ರಯ್ಯನ ಪತ್ನಿ ಅನ್ನಪೂರ್ಣ ಒಪ್ಪಿರಲಿಲ್ಲ. ವಿಶ್ವೇಶ್ವರಯ್ಯ ಯಾವುದೇ ಕೆಲಸ ಇಲ್ಲ, ನೌಕರಿಯೂ ಇಲ್ಲ ಎಂದು ಅನ್ನಪೂರ್ಣ ದಾನಮ್ಮಳನ್ನು ವಿಶ್ವೇಶ್ವರಯ್ಯಗೆ ಕೊಡಲು ನಿರಾಕರಿಸಿದ್ದಳು. ಬಳಿಕ ಬೇರೊಂದು ಕಡೆ ಸಂಬಂಧ ಹುಡುಕುತ್ತಿರುವ ವಿಷಯ ಗೊತ್ತಾಗಿ ಸಿಟ್ಟಾದ ವಿಶ್ವೇಶ್ವರಯ್ಯ ದಾನಮ್ಮಳನ್ನು ಮನೆಯಲ್ಲಿ ಕೂಡಿ ಹಾಕಿ ಕೊಲೆ ಮಾಡಿದ್ದನು.

ಇಂಡಿ ಸಿಪಿಐ ರಾಜಶೇಖರ ಬಡದೇಸಾರ ಸಲ್ಲಿಸಿದ ದೋಷಾರೋಪ ಪಟ್ಟಿಯನ್ವಯ ವಿಚಾರಣೆ ನಡೆಸಿದ ನ್ಯಾಯಾಧೀಶ ಸುಭಾಶ ಸಂಕದ ಜೀವಾವಧಿ ಶಿಕ್ಷೆ ಹಾಗೂ 26 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ವನಿತಾ ಎಸ್.ಇಟಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net