

ತೂಬಗೆರೆ: ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಮಂಗಳವಾರ ಸಾಂಕೇತಿಕವಾಗಿ ಬ್ರಹ್ಮರಥೋತ್ಸವ ಸಂಪನ್ನಗೊಂಡಿತು.
ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿ ಬ್ರಹ್ಮರಥೋತ್ಸವದ ಬದಲಾಗಿ ಸರಳವಾಗಿ ದೇಗುಲದ ಆವರಣದಲ್ಲಿ ಉತ್ಸವ ನೆರವೇರಿಸಲಾಯಿತು. ಆದರೂ ನೆರೆ ಜಿಲ್ಲೆ, ಹೊರರಾಜ್ಯದ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಮುಗಿಬಿದ್ದರು.
ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಲಾಗಿತ್ತು. ಭಕ್ತರು ದೇಗುಲದ ಹೊರಗಿನಿಂದಲೇ ಕೈಮುಗಿದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು. ರಥೋತ್ಸವಕ್ಕೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜಿಪಂ ಸದಸ್ಯ ಎಚ್.ಅಪ್ಪಯ್ಯಣ್ಣ ಚಾಲನೆ ನೀಡಿದರು, ತುಳಸಿ ಷಷ್ಠಿಯಂದು ನಡೆದ ಬ್ರಹ್ಮರಥೋತ್ಸವಕ್ಕೆ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಸೇರಿ ನೆರೆಯ ಜಿಲ್ಲೆಗಳ ಭಕ್ತರು ಆಗಮಿಸಿದ್ದರು. ರಥೋತ್ಸವದ ಮುನ್ನಾದಿನವಾದ ಸೋಮವಾರ ತಡರಾತ್ರಿಯಿಂದಲೇ ರಥಕ್ಕೆ ಅಲಂಕಾರ, ದೇವರ ಮೂರ್ತಿಗೆ ವಿಶೇಷ ಅಲಂಕಾರ ಮತ್ತಿತರ ಧಾರ್ಮಿಕ ವಿಧಿವಿಧಾನಗಳನ್ನು ಆರಂಭಿಸಲಾಗಿತ್ತು.
ಸರದಿ ಸಾಲಿನಲ್ಲಿ ಭಕ್ತರು:
ಸಾರ್ವಜನಿಕರು ದೇವರ ದರ್ಶನಕ್ಕೆ ದೇವಾಲಯದ ಆವರಣದ ಮುಂದೆ ಸರದಿ ಸಾಲಿನಲ್ಲಿ ಸಾಗಿದರು. ದೇಗುಲದ ಆವರಣದಿಂದ ಸುಮಾರು 1 ಕಿ.ಮೀ. ವರೆಗೆ ಭಕ್ತರ ಸಾಲು ಕಂಡುಬಂತು. ತುಳಸಿ ಷಷ್ಠಿ ಅಂಗವಾಗಿ ಮಹಿಳೆಯರು ಇಲ್ಲಿನ ನಾಗರಕಲ್ಲು ಹಾಗೂ ಹುತ್ತಕ್ಕೆ ಹಾಲೆರೆದು ಪೂಜಾಕಾರ್ಯಗಳನ್ನು ನೆರವೇರಿಸಿದರು.
ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿಸಿದ್ದಪ್ಪ, ಇಒ ಕೃಷ್ಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಸಾರ್ವಜನಿಕರ ಸಿಡಿಮಿಡಿ: ಕರೊನಾ ಹಿನ್ನೆಲೆಯಲ್ಲಿ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ನಿಷೇಧ ಹೇರಲಾಗಿತ್ತು. ಆದರೆ ಗಣ್ಯರಿಗೆ ಪ್ರವೇಶ ನೀಡಿದ್ದರಿಂದ ಸಾರ್ವಜನಿಕರು ಸಿಡಿಮಿಡಿಗೊಂಡರು. ಅವರಿಗೆ ಮಾತ್ರ ಪ್ರವೇಶ ನೀಡಲಾಗಿದೆ, ದೂರದಿಂದ ಬಂದ ನಮಗೆ ಅವಕಾಶ ನೀಡದೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವ್ಯವಸ್ಥೆಗೆ ಆಕ್ರೋಶ: ಕರೊನಾ ನಿಯಮ ಗಾಳಿಗೆ ತೂರಿದ ದೇವಾಲಯದ ಸಿಬ್ಬಂದಿ ಭಕ್ತರಿಗೆ ಸಮರ್ಪಕ ಸೌಲಭ್ಯ ಕಲ್ಪಿಸದೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಗಣ್ಯರಿಗೆ, ರಾಜಕೀಯ ನಾಯಕರ ಹಿಂಬಾಲಕರಿಗೆ ದರ್ಶನ ಕಲ್ಪಿಸುವಲ್ಲಿ ನಿರತರಾಗಿದ್ದ ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು.