ಅಡಕೆ ತೋಟ ಬೆಂಕಿಗಾಹುತಿ

The garden caught fire
Published on

ಶಿರಸಿ: ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಎಕರೆಗೂ ಅಧಿಕ ವಿಸ್ತೀರ್ಣದ ಅಡಕೆ ತೋಟ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಹೆಗಡೆಕಟ್ಟ ಪಂಚಲಿಂಗ ಪಕ್ಕದ ಮುಂಡಗೆಮನೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಇಲ್ಲಿನ ನಾಲ್ವರು ರೈತರಿಗೆ ಸಂಬಂಧಿಸಿದ ಅಡಕೆ ತೋಟ ಬೆಂಕಿಗೆ ಹಾನಿಯಾಗಿದೆ. ಶಿರಸಿ ತಾಲೂಕಿನಲ್ಲೇ ಕಳೆದ ಒಂದು ತಿಂಗಳಿಂದ ಈಚೆಗೆ ಕಲಕೈ, ಅಮಚಿಮನೆ ತೋಟಗಳು ಸುಟ್ಟ ವರದಿ ಬೆನ್ನಲ್ಲೇ ಮುಂಡಿಗೆಮನೆ ತೋಟದ ಸರಕೆ ಬೆಂಕಿ ಬಿದ್ದಿದೆ. ತಡ ರಾತ್ರಿ 2 ಗಂಟೆ ಸುಮಾರಿಗೆ ಬೆಂಕಿ ತಗುಲಿದೆ.

ಬಾಳೆ, ಏಲಕ್ಕಿ, ಕಾಳು ಮೆಣಸು, ಅಡಕೆ ಸೇರಿದಂತೆ ಬಹು ಬೆಳೆಗಳು ಹಾನಿಯಾಗಿವೆ. ಬೇಸಿಗೆಯ ಕಾಲದಲ್ಲಿ ಭೂಮಿ ಕಾಯಬಾರದು, ಮಳೆಗಾಲದಲ್ಲಿ ಮೇಲ್ಮಣ್ಣು ತೊಯ್ಯಬಾರದು ಎಂದು ಹಾಕಲಾದ ದಪ್ಪನೆಯ ಕರಡ, ದರಕುಗಳಿಗೆ ಅಗ್ನಿ ತಗುಲಿ ಸಂಪೂರ್ಣ ಸುಟ್ಟಿದೆ.

ಗೋಪಾಲಕೃಷ್ಣ ಹೆಗಡೆ ಸಹೋದರರ ಅರ್ಧ ಎಕರೆಗೂ ಅಧಿಕ ತೋಟ, ಮಧುಕೇಶ್ವರ ಹೆಗಡೆ ಅವರ 15 ಗುಂಟೆ ತೋಟ, ಈಶ್ವರ ಹೆಗಡೆ ಕೊರಟಿಬೈಲಿನ ಹಾಗೂ ತಿಮ್ಮಾಣಿ ದೀಕ್ಷಿತರಿಗೆ ಸಂಬಂಧಿಸಿದ 8-10 ಗುಂಟೆ ತೋಟಕ್ಕೆ ಹಾನಿಯಾಗಿದೆ. ರಾತ್ರಿ ಸುದ್ದಿ ತಿಳಿದ ಗ್ರಾಮಸ್ಥರು ಆಗಮಿಸಿ ಬೆಂಕಿ ಆರಿಸಲು ಬೆಳಗಿನ ತನಕ ಶ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net