ಕರೊನಾ ತಡೆಗೆ ಅಂತರವೇ ಔಷಧ, ಶಾಸಕ ಶರತ್ ಬಚ್ಚೇಗೌಡ ಸಲಹೆ, ನಿಯಮ ಪಾಲನೆಗೆ ಅಸಡ್ಡೆ ತೊರದಂತೆ ಮನವಿ

7slb5
Published on

ಸೂಲಿಬೆಲೆ: ಕರೊನಾ ಸೋಂಕು ಲಕ್ಷಣಗಳಿಲ್ಲದವರಲ್ಲೂ ಪಾಸಿಟಿವ್ ಬಂದಿರುವ ನಿದರ್ಶನ ಸಾಕಷ್ಟಿವೆ. ಆದ್ದರಿಂದ ಕಡ್ಡಾಯವಾಗಿ ವೈಯಕ್ತಿಕ ಅಂತರ ಕಾಯ್ದುಕೊಳ್ಳಿ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ದೊಡ್ಡಹರಳಗೆರೆ ಗ್ರಾಪಂ ಕಚೇರಿಯಲ್ಲಿ ಗುರುವಾರ ಕರೆದಿದ್ದ ಟಾಸ್ಕ್‌ಪೋರ್ಸ್ ಸಭೆಯಲ್ಲಿ ಮಾತನಾಡಿದರು.

ಕರೊನಾ ರೋಗದಲ್ಲಿ ಕೆಲವರಿಗೆ ನೆಗಡಿ, ಕೆಮ್ಮು, ಲಕ್ಷಣ ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಅಂತರ ಕಾಯ್ದುಕೊಳ್ಳಬೇಕು. 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ಇವರ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡಬೇಕು ಎಂದರು.

ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶ್‌ಗೌಡ ಮಾತನಾಡಿ, ಹೊರ ಜಿಲ್ಲೆ, ರಾಜ್ಯ, ವಿದೇಶಗಳಿಂದ ಯಾರೇ ಗ್ರಾಮಗಳಿಗೆ ಬಂದರೆ, ಅಂತಹ ವ್ಯಕ್ತಿಗಳ ಮಾಹಿತಿಯನ್ನು ಟಾಸ್ಕ್‌ಫೋರ್ಸ್‌ಗೆ ನೀಡಬೇಕು. 28 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲಾಡಳಿತ, ಆರೋಗ್ಯ, ಪೊಲೀಸ್, ಗ್ರಾಪಂ ಹಾಗೂ ಆಶಾ ಕಾರ್ಯಕರ್ತರ ಪರಿಶ್ರಮ ಕಾರಣ ಎಂದರು.

ಗ್ರಾಪಂ ಅಧ್ಯಕ್ಷೆ ಸುಜಯ್ ಕುಮಾರಿ ಮರಿಯಪ್ಪ, ಬೆಂಡಿಗಾನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಶಿವಕುಮಾರ್, ವೈದ್ಯಾಧಿಕಾರಿ ಡಾ.ಫರ್ಜನಾ ಫರ್ವೀನ್, ಜಿಲ್ಲಾ ಮಲೇರಿಯಾ ತಡೆ ಮೇಲ್ವೀಚಾರಕ ಚಂದ್ರಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net