ಶಿಕ್ಷಣ, ವಿದ್ಯಾರ್ಥಿಗಳ ಕೈಯಲ್ಲಿದೆ ದೇಶದ ಭವಿಷ್ಯ

HIREKERUR
ಫಲಾನುಭವಿಗಳಿಗೆ ಶಿಷ್ಯ ವೇತನದ ಆದೇಶ ಪ್ರತಿಗಳನ್ನು ಶಾಸಕ ಯು.ಬಿ. ಬಣಕಾರ ವಿತರಿಸಿದರು
Published on

ಹಿರೇಕೆರೂರ: ರಾಜ್ಯದ ಪ್ರತಿ ಹಳ್ಳಿಯಲ್ಲಿ ಜನಸಾಮಾನ್ಯರಿಗೆ ಅತ್ಯಂತ ಉಪಯುಕ್ತವಾದ ಯೋಜನೆ ಅನುಷ್ಠಾನಗೊಳಿಸುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕಾರ್ಯ ಶ್ಲಾಘನೀಯ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಡಾ. ಎಪಿಜೆ ಅಬ್ದುಲ್ ಕಲಾಂ ಸಭಾಭವನದಲ್ಲಿ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸುಜ್ಞಾನ ನಿಧಿ ಯೋಜನೆಯಡಿ ಶಿಷ್ಯವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಭವಿಷ್ಯ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕೈಯಲ್ಲಿದೆ. ಶಿಕ್ಷಣ, ಕೃಷಿ, ಕೆರೆ ಹೂಳು ಎತ್ತುವುದು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಅನೇಕ ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಆರ್ಥಿಕ ಪ್ರಗತಿಗೆ ಧಗ್ರಾ ಯೋಜನೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಡಾ. ನಿಂಗಪ್ಪ ಚಳಗೇರಿ ಮಾತನಾಡಿ, ಕೆಲ ಎಡಪಂಥಿಯರು ಮತ್ತು ಪಟ್ಟಬದ್ಧ ಹಿತಾಸಕ್ತಿಗಳು ಧರ್ಮಸ್ಥಳ ಕ್ಷೇತ್ರವನ್ನು ಹಾಳು ಮಾಡಲು ಯತ್ನಿಸುತ್ತಿವೆ. ಅಂತಹವರ ವಿರುದ್ಧ ಸಂಘದ ಸದಸ್ಯರು ಧ್ವನಿ ಎತ್ತಬೇಕಾಗಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ, ನಿಂದನೆ, ಆರೋಪಗಳು ಬಂದಾಗ ಈ ಹಿಂದಿನ ಸರ್ಕಾರಗಳು ಸುಮ್ಮನಾಗಿದ್ದವು. ಸಿಎಂ ಸಿದ್ದರಾಮಯ್ಯನವರ ಸರ್ಕಾರ ಅಂತಹ ಊಹಾಪೋಹಗಳಿಗೆ ತನಿಖೆ ಮೂಲಕ ಇತಿಶ್ರೀ ಹಾಡಲು ಮುಂದಾಗಿದೆ ಎಂದರು.

ಧಗ್ರಾ ಯೋಜನಾಧಿಕಾರಿ ಸುನಿತಾ ಮಾತನಾಡಿ, ಸುಜ್ಞಾನ ನಿಧಿಯಡಿ ಈಗಾಗಲೇ ರಾಜ್ಯದಲ್ಲಿ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ 1.25 ಕೋಟಿ ರೂ. ಶಿಷ್ಯ ವೇತನ ವಿತರಿಸಲಾಗಿದೆ ಎಂದರು. ತಾಲೂಕಿನ 132 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಆದೇಶ ಪತ್ರ ಹಸ್ತಾಂತರಿಸಲಾಯಿತು.

ಉದ್ಯಮಿ ಶಂಭಣ್ಣ ಗೂಳಪ್ಪನವರ, ಮಂಜಪ್ಪ ಹಾಗೂ ಒಕ್ಕೂಟಗಳ ಮಹಿಳಾ ಸದಸ್ಯೆಯರು, ಯೋಜನೆಯ ಅಧಿಕಾರಿಗಳು ಇದ್ದರು.

ಕೃಷಿ ಅಧಿಕಾರಿ ಧರ್ಮಪ್ಪ ಜೊಗೇರ, ಮೇಲ್ವಿಚಾರಕರಾದ ಪ್ರಶಾಂತ ಮರಾಠೆ, ವಿವೇಕಾನಂದ ಎಲ್.ಜಿ., ಸಾಗರ್ ಒಡ್ಡಟ್ಟಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net