

ಧಾರವಾಡ: ದೇಶದ ಉಜ್ವಲ ಭವಿಷ್ಯ ಮಕ್ಕಳ ಮೇಲೆ ಅವಲಂಬಿಸಿದೆ. ಬಸವಾದಿ ಶರಣರ ಪ್ರತಿಯೊಂದು ವಚನಗಳಲ್ಲಿ ಜೀವನ ಮೌಲ್ಯಗಳ ತುಡಿತ ಅಡಗಿದೆ. ಪಾಲಕರು ಮಕ್ಕಳಿಗೆ ಶರಣರ ನಡೆ-ನುಡಿ ಪರಿಪಾಲಿಸುವಂತೆ ಪ್ರೋತ್ಸಾಹಿಸಬೇಕು. ಆಗಲೇ ಮಕ್ಕಳಲ್ಲಿ ಸಂಸ್ಕಾರ ಬೆಳೆಯಲು ಸಾಧ್ಯ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಕೆ.ಎಚ್.ನಾಯಕ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಂಗ ಸಾಮ್ರಾಟ ಸಾಂಸ್ಕೃತಿಕ ಶಿಕ್ಷಣ ಕ್ರೀಡಾ ಸಂಶೋಧನಾ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಬಾಲ ಬಸವ ಪ್ರಶಸ್ತಿ 2025’ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಂಗ ಸಾಮ್ರಾಟ ಅಭಿನಯ ಶಾಲೆ ನಿರ್ದೇಶಕ ಸಿಕಂದರ ದಂಡಿನ ಮಾತನಾಡಿ, ರಂಗ ಸಾಮ್ರಾಟ ಶಾಲೆಯು ಮಕ್ಕಳಿಗೆ 10 ವರ್ಷದಿಂದ ಮಕ್ಕಳ ಮನೋವಿಕಾಸಕ್ಕಾಗಿ ಪೂರಕ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಗುರಿ ಹೊಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಮಾತನಾಡಿ, ದೇಶದ ಭವಿಷ್ಯ ಅಡಿಗಿರುವುದೇ ವರ್ಗದ ಕೋಣೆಯಲ್ಲಿ. ಹಾಗಾಗಿ ಎಳೆ ವಯಸ್ಸಿನಲ್ಲಿ ಅವರಿಗೆ ಒಳ್ಳೆಯ ಆಚಾರ-ವಿಚಾರಗಳ ಸಂಸ್ಕಾರ ಬೆಳೆಸಿದರೆ ದೇಶಕ್ಕೆ ಭರವಸೆಯ ವ್ಯಕ್ತಿಗಳಾಗಲು ಸಾಧ್ಯ ಎಂದರು.
ಬಳಿಕ ಬಾಲಬಸವ ಪ್ರಶಸ್ತಿ ನೀಡಲಾಯಿತು. ಅಯನ ಪಿ., ಆಶ್ನಲೇನ ಪಿರೇರಾ, ಪ್ರಣವ ಶಿವರಂಜನ್ ಸತ್ಯಂಪೇಟೆ, ಕೃಷ್ನಂ ಪ್ರಿಯಾ, ಆರುಷಿ ಜವಳಿ, ವಿಧಿತ್ ಬ್ಯಾಡಗಿ, ಆಕರ್ಷ ಜಿ., ಶ್ರೀನಿಧಿ ಜಕ್ಕಣ್ಣವರ, ಸಹನಾ ಯಡ್ರಾವಿ, ಲತೀಕಾ ಯರಗಟ್ಟಿ, ಅಂಜಲಿ ಚಕ್ರಸಾಲಿ, ಪೂರ್ವಿ ಹಲಗಿ, ಶ್ರೀನಿಧಿ ಗಾಣಿಗೇರ, ಚಿರಂತನರಾಜ ಬಾಸುರ್, ಶಿವುಕುಮಾರ ನರಗುಂದ, ಶ್ರೀವತ್ಸ ಸೋಮನಖೋಟ್, ಆರಾಧ್ಯ ಪಾಟೀಲ, ವಿಭಾ ನಾಯಕ, ಶ್ರೀಕಾ ನಾಯಕ ಅವರಿಗೆ ಬಾಲ ಬಸವಾ ಪ್ರಶಸ್ತಿ-2025 ಸ್ವೀಕರಿಸಿದರು. ನಂತರದಲ್ಲಿ ಅಂತಾರಾಷ್ಟ್ರೀಯ ಟೇಕ್ವಾಂಡೋ ಕ್ರೀಡಾಪಟು ಪ್ರಮೋದಗೌಡ ದ್ಯಾಪುರ ಅವರಿಗೆ ರಂಗ ಸಾಮ್ರಾಟ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಶಿವಾನಂದ ನಾಗೂರ ವೇದಿಕೆಯಲ್ಲಿದ್ದರು. ಚಿದಾನಂದ ಭಜಂತ್ರಿ, ಶಿವಾನಂದ ಭಜಂತ್ರಿ, ಎನ್.ಬಿ.ದ್ಯಾಪುರ, ರಾಮ್ ಪಟವರ್ಧನ, ಪ್ರಿಯಾಂಕಾ ಕೆ.ಇದ್ದರು. ಶ್ರುತಿ ಹುರಳಿಕೊಪ್ಪ ಸ್ವಾಗತಿಸಿದರು. ವಿ.ಎನ್.ಕೀರ್ತಿವತಿ ನಿರೂಪಿಸಿದರು. ಚಿದಾನಂದ ಭಜಂತ್ರಿ ವಂದಿಸಿದರು.