

ರಾಯಚೂರು: ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಣದಲ್ಲಿದ್ದ ಎಂಟು ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿವೆ. 28 ದಿನಗಳ ನಂತರ ನಡೆಯಲಿರುವ ಮತ ಎಣಿಕೆಯಿಂದ ಮತದಾರ ಯಾರಿಗೆ ಮಣೆ ಹಾಕಿದ್ದಾನೆ ಎಂಬುದು ಬಹಿರಂಗವಾಗಲಿದೆ.
ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳ 2,203 ಮತಗಟ್ಟೆಗಳಿಂದ ಮತಯಂತ್ರಗಳನ್ನು ನಗರದ ಎಲ್‌ವಿಡಿ ಕಾಲೇಜಿಗೆ ತಂದು ಭದ್ರತಾ ಕೊಠಡಿಯಲ್ಲಿಡಲಾಗಿದೆ. ಮತಯಂತ್ರಗಳನ್ನಿಡಲಾಗಿರುವ 13 ಕೊಠಡಿಗಳಿಗೆ ಅರೆ ಸೇನಾ ಪಡೆಯ ಭದ್ರತೆ ಕಲ್ಪಿಸಲಾಗಿದೆ.
ಕಳೆದ ಹಲವು ದಿನಗಳಿಂದ ಚುನಾವಣೆ ಗಡಿಬಿಡಿಯಲ್ಲಿದ್ದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಇಂದು ರಿಲ್ಯಾಕ್ಸ್ ಮೂಡನಲ್ಲಿದ್ದರೂ, ಯಾವ ಕ್ಷೇತ್ರದಲ್ಲಿ ಮತದಾರರು ಯಾರಿಗೆ ಒಲವು ತೋರಿದ್ದಾರೆ ಎಂಬ ಮಾಹಿತಿ ಪಡೆದುಕೊಳ್ಳುವಲ್ಲಿ ನಿರತರಾಗಿದ್ದಾರೆ.
ಹಿಂದಿನ ಚುನಾವಣೆಗಳಿಗೆ ಹೋಲಿಸಿದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದ ಮತದಾನವಾಗಿದ್ದು, ಅದರಿಂದ ಯಾರಿಗೆ ಲಾಭವಾಗಲಿದೆ. ಯಾರಿಗೆ ನಷ್ಟವಾಗಲಿದೆ ಎನ್ನುವ ಬಗ್ಗೆ ಹೆಚ್ಚಿನ ಲೆಕ್ಕಾಚಾರ ನಡೆಸಲಾಗುತ್ತಿದೆ. ಕೇವಲ ರಾಜಕೀಯ ವ್ಯಕ್ತಿಗಳು ಮಾತ್ರವಲ್ಲ ಸಾಮಾನ್ಯ ಜನರು ಕೂಡಾ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಂತೂ ಹೆಚ್ಚಿನ ಚರ್ಚೆ ನಡೆಯುತ್ತಿದ್ದು, ತಮ್ಮ ಗ್ರಾಮದಲ್ಲಿ ಮತದಾರರು ಯಾವ ಕಡೆ ವಾಲಿದ್ದಾರೆ ಎನ್ನುವುದ ಜತೆಗೆ ತಮ್ಮ ಅಕ್ಕಪಕ್ಕ ಮತ್ತು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನದ ದಿನದಂದು ಯಾವ ರೀತಿಯ ವಾತಾವರಣವಿದೆ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ನಾಯಕರು ಕ್ಷೇತ್ರದ ವ್ಯಾಪ್ತಿಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ಮತ್ತು ಮತದಾರರ ಒಲವು ಯಾರ ಕಡೆಗಿದೆ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡು ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮತ ಎಣಿಕೆಗೆ ಬಹಳಷ್ಟು ದಿನಗಳು ಬಾಕಿಯಿರುವುದರಿಂದ ಲಿತಾಂಶ ಏನಾಗಲಿದೆ ಎನ್ನುವ ಬಗ್ಗೆ ಹೆಚ್ಚಿನ ಕುತೂಹಲವಿದ್ದು, ಗುಂಪುಗೂಡಿ ಯಾವ ಕ್ಷೇತ್ರದಲ್ಲಿ ಮತದಾರರು ಯಾರಿಗೆ ಮಣೆ ಹಾಕಿರಬಹುದು ಎನ್ನುವ ಲೆಕ್ಕಾಚಾರ ನಡೆಸುತ್ತಿದ್ದಾರೆ.