ಒಂದೂವರೆ ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ: ಇನ್ನೂ ನಿಗದಿಯಾಗದ ಪ್ರವೇಶ ಪರೀಕ್ಷೆ

College School
Published on

ರಾಜ್ಯದ ವಸತಿ ಶಾಲೆಗಳಲ್ಲಿ ಆರನೇ ತರಗತಿ ಪ್ರವೇಶಕ್ಕಾಗಿ ಇದುವರೆಗೆ ಪ್ರವೇಶ ಪರೀಕ್ಷೆ ನಡೆದಿಲ್ಲ. ಈಗಾಗಲೇ ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿರುವುದರಿಂದ ವಸತಿ ಶಾಲೆಗಳಲ್ಲಿ ಆರನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿ ಸರ್ಕಾರ ಯಾವ ಮಾನದಂಡ ಅನುಸರಿಸಲಿದೆ ಎಂಬುದು ಪಾಲಕರ ಪ್ರಶ್ನೆಯಾಗಿದೆ. ಈ ಕುರಿತು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮದ ಎಸ್.ವಿ.ಜಯಪ್ರಸಾದ್ ಎಂಬುವರು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡಿದ್ದು, ಈ ಕುರಿತು ಬಳ್ಳಾರಿ ಜಿಲ್ಲಾ ವರದಿಗಾರ ಅಶೋಕ ನೀಮಕರ್ ವಿಶೇಷ ವರದಿ ಸಿದ್ಧಪಡಿಸಿದ್ದಾರೆ.

ಬಳ್ಳಾರಿ: ಕರೊನಾ ಕಾರಣದಿಂದಾಗಿ ವಸತಿ ಶಾಲೆಗಳಿಗೆ ಪ್ರವೇಶ ಪಡೆಯಬೇಕಿದ್ದ ವಿದ್ಯಾರ್ಥಿಗಳ ಬದುಕು ಅತಂತ್ರಕ್ಕೆ ಸಿಲುಕಿದೆ. ಪ್ರಸಕ್ತ ವರ್ಷದ ಶೈಕ್ಷಣಿಕ ವ್ಯವಸ್ಥೆ ಮೇಲೆ ಕೋವಿಡ್ ವ್ಯತಿರಿಕ್ತ ಪರಿಣಾಮ ಬೀರಿದ್ದು, ರೋಗ ಭೀತಿಯ ಪರಿಣಾಮ ರಾಜ್ಯದ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ಸೇರಿ ವಿವಿಧ ಮಾದರಿಯ ವಸತಿ ಶಾಲೆಗಳ ಪ್ರವೇಶಕ್ಕೂ ತಟ್ಟಿದೆ. ವಸತಿ ಶಾಲೆಗಳ ಪ್ರವೇಶಕ್ಕೆ ಇದುವರೆಗೆ ಪ್ರವೇಶ ಪರೀಕ್ಷೆಯೇ ನಡೆದಿಲ್ಲ. ವಸತಿ ಶಾಲೆಗಳ ಆರನೇ ತರಗತಿ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಪರೀಕ್ಷೆ ಆಯೋಜಿಸಲಾಗುತ್ತದೆ.

ಪ್ರಸಕ್ತ ಸಾಲಿನ ಪ್ರವೇಶ ಪರೀಕ್ಷೆಗಾಗಿ ಕೆಇಎ 2020ರ ಮಾ.11ರಂದು ಅಧಿಸೂಚನೆ ಹೊರಡಿಸಿತ್ತು. ಮಾ.12ರಿಂದ ಏ.3ರವರೆಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಮೇ 6ರಂದು ಪ್ರವೇಶ ಪರೀಕ್ಷೆ ನಿಗದಿಪಡಿಸಲಾಗಿತ್ತು. ಏ.20ರಿಂದ ಪ್ರವೇಶ ಪತ್ರಗಳನ್ನು ಡೌನ್​ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಆದರೆ, ಕರೊನಾ ಲಾಕ್​ಡೌನ್​ದಿಂದಾಗಿ ಪ್ರವೇಶ ಪರೀಕ್ಷೆ ನಿಗದಿಯಂತೆ ನಡೆದಿಲ್ಲ.

ಬಳಿಕ ಅರ್ಜಿ ಸಲ್ಲಿಕೆ ಅವಧಿಯನ್ನು ಸೆ.5ರವರೆಗೆ ವಿಸ್ತರಿಸಲಾಗಿತ್ತು. ವಸತಿ ಶಾಲೆಗಳಲ್ಲಿ ಪ್ರವೇಶ ಬಯಸಿ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಶಾಲೆಗಳ ಆರಂಭದ ಬಗ್ಗೆ ಗೊಂದಲಗಳಿಂದಾಗಿ ಇದುವರೆಗೆ ಪ್ರವೇಶ ಪರೀಕ್ಷೆ ಆಯೋಜಿಸಿಲ್ಲ. ಇದರಿಂದಾಗಿ ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಇಚ್ಛಿಸಿರುವ ಮಕ್ಕಳ ಭವಿಷ್ಯವೇನು ಎಂಬ ಪ್ರಶ್ನೆ ಪಾಲಕರನ್ನು ಕಾಡುತ್ತಿದೆ.

ರಾಜ್ಯದಲ್ಲಿ 402 ಮುರಾರ್ಜಿ ದೇಸಾಯಿ, 115 ಕಿತ್ತೂರು ರಾಣಿ ಚನ್ನಮ್ಮ, ತಲಾ ನಾಲ್ಕು ಏಕಲವ್ಯ ಹಾಗೂ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿವೆ. ಈ ಶಾಲೆಗಳಲ್ಲಿ 40

ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಇದೆ. ವಸತಿ ಶಾಲೆಗಳು ರಾಜ್ಯ ಸರ್ಕಾರದ ಅಂಗಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಆಶ್ರಯದಡಿ ಕಾರ್ಯನಿರ್ವಹಿಸುತ್ತಿವೆ.

ಸರ್ಕಾರಿ ವಸತಿ ಶಾಲೆಗಳಲ್ಲಿ ಆರನೇ ತರಗತಿ ಯಿಂದ ಪ್ರವೇಶ ನೀಡಲಾಗುತ್ತದೆ. ಆದರೆ, ಇದುವರೆಗೆ ಪ್ರವೇಶ ಪರೀಕ್ಷೆ ನಡೆದಿಲ್ಲ. ಇದರಿಂದಾಗಿ ವಸತಿ ಶಾಲೆಗಳಲ್ಲಿ ಆರನೇ ತರಗತಿಗೆ ಪ್ರವೇಶ ಪಡೆಯಬೇಕಿದ್ದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಶಿಕ್ಷಣ ಇಲಾಖೆಯ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಬೇಕು. | ಎಸ್.ವಿ.ಪ್ರಸಾದ್ ಪಾಲಕರು ಗುಡೆಕೋಟೆ ಗ್ರಾಮ ಪ್ರವೇಶ ಪರೀಕ್ಷೆ ಹಾಗೂ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕೆಇಎಗೆ ವಹಿಸಲಾಗಿದೆ. ಕೋವಿಡ್ ಕಾರಣಕ್ಕೆ ಪ್ರವೇಶ ಪರೀಕ್ಷೆ ನಡೆದಿಲ್ಲ. ಪ್ರವೇಶ ಪರೀಕ್ಷೆ ಸಾಧ್ಯವಾಗದಿದ್ದರೆ ಐದನೇ ತರಗತಿ ಫಲಿತಾಂಶ ಆಧರಿಸಿ ಆಯ್ಕೆಪಟ್ಟಿ ನೀಡುವಂತೆ ಸೂಚಿಸಲಾಗಿದೆ. ಶಾಲೆಗಳ ಆರಂಭ ವಿಳಂಬವಾದರೆ ಏಕಕಾಲಕ್ಕೆ ಆರು ಹಾಗೂ ಏಳನೇ ತರಗತಿಗೆ ಪ್ರವೇಶ ಅವಕಾಶ ಕಲ್ಪಿಸಬೇಕಾಗಬಹುದು. ಈ ಕುರಿತು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. | ಟಿ.ರಾಘವೇಂದ್ರ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net