

ಕೋಲಾರ: ಕಾರ್ಯ ನಿಮಿತ್ತ ಬುಧವಾರ ಶ್ರೀನಿವಾಸಪುರದಿಂದ ಕೋಲಾರಕ್ಕೆ ಬರುತ್ತಿದ್ದ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಮಾರ್ಗಮಧ್ಯದ ಮುದವಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದ್ದರು. ಶಾಲೆ ಹಾಗೂ ಅಂಗನವಾಡಿ ನಡುವೆಯೇ ಕುಲುಮೆ ಶಬ್ದ ಮಕ್ಕಳಿಗೆ ಕಿರಿಕಿರಿ ಉಂಟಾಗುವುದನ್ನು ಕೇಳಿಸಿಕೊಂಡ ಜಿಲ್ಲಾಧಿಕಾರಿಗಳು ತಕ್ಷಣವೇ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವಿಣ್ ಬಾಗೇವಾಡಿ ಅವರನ್ನು ಸಂಪರ್ಕಿಸಿ ಕುಲುಮೆಯನ್ನು ಶಾಲೆಯಿಂದ ದೂರ ಬದಲಾಯಿಸುವಂತೆ ಸೂಚಿಸಿದರು.
ಆ ಕ್ಷಣಕ್ಕೆ ಸಿಇಒ ಅವರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ಬಂದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ವೇಳೆಗೆ ಪಿಡಿಒ ಕುಲುಮೆ ಮಾಲೀಕನಿಗೆ ನೋಟೀಸ್ ಜಾರಿ ಮಾಡಿ, ಕುಲುಮೆಯನ್ನು ಸ್ಥಳಾಂತರಿಸಿದ್ದಾರೆ. ಇದರಿಂದಾಗಿ ಪ್ರಶಾಂತವಾಗಿ ಮಕ್ಕಳು ಪಾಠ ಕೇಳುವಂತಾಗಿದ್ದು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಕೈಗೊಂಡ ಕ್ರಮವನ್ನು ಗ್ರಾಮಸ್ಥರು ಸ್ವಾಗತಿಸಿದ್ದಾರೆ.
ಕುಲುಮೆಯ ಶಬ್ದದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣುಕುಗಳು ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿತ್ತು.