

ಕೂಡಲಸಂಗಮ: ಮಲಪ್ರಭಾ, ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆಗೆ ನಾರಾಯಣಪುರ ಜಲಾಶಯ ಹಿನ್ನೀರಿನ ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪ ಬಳಿ ಜಲರಾಶಿ ವಿಶಾಲವಾಗಿ ಹರಡಿಕೊಂಡಿದೆ.
ಕಳೆದ ಒಂದು ತಿಂಗಳಿಂದ ಬರಿದಾಗಿದ್ದ ಕೃಷ್ಣಾ, ಮಲಪ್ರಭಾ ಒಡಲು ನಾಲ್ಕು ದಿನಗಳಲ್ಲಿ ತುಂಬಿಕೊಂಡು ಪುನಃ ಜೀವಕಳೆ ಪಡೆದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಳೆದ ಎರಡು ದಿನಗಳಿಂದ ತಂಡೋಪತಂಡವಾಗಿ ಪ್ರವಾಸಿಗರು ಸುಕ್ಷೇತ್ರಕ್ಕೆ ಆಗಮಿಸಿ ನದಿ ವಿಹಂಗಮ ದೃಶ್ಯ ನೋಡಿ ಸಂಭ್ರಮಿಸುತ್ತಿದ್ದಾರೆ.
ಪ್ರತಿ ವರ್ಷ ಏಪ್ರಿಲ್‌ದಿಂದ ಜೂನ್ ಅಂತ್ಯದವರೆಗೆ ನದಿ ಒಡಲು ಬರಿದಾಗುತ್ತಿತ್ತು. ಈ ವರ್ಷ ಏಪ್ರಿಲ್ ಕೊನೆಯ ವಾರ ಇಳಿಮುಖಗೊಂಡು ಮೇ ಮೂರನೇ ವಾರ ತುಂಬಿಕೊಂಡಿದೆ. ಅವಧಿಗೂ ಮುನ್ನ ನದಿ ಒಡಲು ತುಂಬಿರುವುದರಿಂದ ಪುಣ್ಯಸ್ನಾನಕ್ಕೆ ಬರುವ ಭಕ್ತರು, ನದಿ ದಡದ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ. ಕಳೆದ ಎರಡು ತಿಂಗಳು ಬಿಸಿಲಿನಿಂದ ತತ್ತರಿಸಿದ ಜನರಿಗೆ ಕತಿಕಾ ಮಳೆ ತಂಪೆರೆದಿದ್ದು, ಎರಡು ದಿನದಿಂದ ಕೂಡಲಸಂಗಮದಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ.