

ಆದರ್ಶ್ ಅದ್ಕಲೇಗಾರ್ ಮಡಿಕೇರಿ
ಮಂಜಿನ ನಗರಿ, ಪ್ರವಾಸಿಗರ ನೆಚ್ಚಿನ ತಾಣ ರಾಜಾಸೀಟ್‌ನಲ್ಲಿ ಶುಕ್ರವಾರದಂದು ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಶುಕ್ರವಾರದಿಂದ ಭಾನುವಾರದವರೆಗೆ ನಗರದ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಮಡಿಕೇರಿ ನಗರದ ಹೆಮ್ಮೆಯ ಕಿರೀಟ, ರಾಜ ಪರಂಪರೆಯ ಪ್ರತೀಕ ರಾಜಾಸೀಟು ಉದ್ಯಾನ ಎಲ್ಲರ ಮನಸೂರೆಗೊಳಿಸುತ್ತದೆ. ಆದರೆ ಶುಕ್ರವಾರ ಕೊಂಚ ಕ್ಷೀಣವಾಗಿತ್ತು. ಶನಿವಾರ, ಭಾನುವಾರವು ಇರುವ ಪರಿಣಾಮ ಹೆಚ್ಚಿನ ಪ್ರವಾಸಿಗರ ನಿರೀಕ್ಷೆಯಲ್ಲಿ ಇಲಾಖೆಗಳಿದೆ.
ಎರಡು ವರ್ಷಗಳ ಬಳಿಕ ಮಡಿಕೇರಿಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟಿನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ನಾಲ್ಕುನಾಡು ಅರಮನೆ, ಮಕ್ಕಳಿಗೆ ಮಿಕ್ಕಿಮೌಸ್, ವೀಕ್ಷಕರಿಗೆ ಸೆಲ್ಫಿ ಪಾಯಿಂಟ್ ಹಾಗೂ ವಿವಿಧ ಹೂಗಳಿಂದ ಬಗೆ ಬಗೆಯ ಕಲಾಕೃತಿಗಳನ್ನು ನಿರ್ಮಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ಅಲಂಕಾರಿಕ ವಿವಿಧ ಹೂ ಕುಂಡಗಳ ಪ್ರದರ್ಶನ, ಬೊನ್ಸಾಯ್ ಪ್ರದರ್ಶನ ಪ್ರವಾಸಿಗರ ಗಮನ ಸೆಳೆಯಿತು. ತರಕಾರಿಯಿಂದ ಭಗತ್ ಸಿಂಗ್, ನರೇಂದ್ರ ಮೋದಿ, ಪುನೀತ್ ರಾಜ್‌ಕುಮಾರ್, ಶಿವಾಜಿ, ಅಂಬೇಡ್ಕರ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಕಾಂತಾರ ಚಿತ್ರದ ಪಂಜೂರ್ಲಿ ದೈವ ಸೇರಿದಂತೆ ಹಲವು ಗಣ್ಯರ ಚಿತ್ರ ಆಕರ್ಷಿಸಿದರೆ, ಬದನೆಯಲ್ಲಿ ನವೀಲು ರಚನೆ ಗಮನ ಸೆಳೆಯಿತು.
ಗಮನ ಸೆಳೆದ ಕಲಾಕೃತಿಗಳು: ಫಲಪುಷ್ಪಗಳ ನಡುವೆ ಪ್ರವಾಸಿಗರನ್ನು ಆಕರ್ಷಿಸಲು ಆನೆ, ಡೈನೋಜ್ಹರ್, ಒಂಟೆ, ಘೆಂಡಾಂಮೃಗ, ಜಿಂಕೆ, ಹುಲಿ ಕಲಾಕೃತಿ ಒಂದೆಡೆ ಸೆಳೆದರೆ, ಐ ಲವ್ ರಾಜಸೀಟ್ ಸೆಲ್ಫಿ ಸ್ಪಾಟ್‌ನಲ್ಲಿ ಪ್ರವಾಸಿಗರು ಪೋಟೋ ಕ್ಲಿಕ್ಕಿಸಿದರು.
ವಸ್ತು ಪ್ರದರ್ಶನ: ಗಾಂಧಿ ಮೈದಾನದಲ್ಲಿ ವಿವಿಧ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ, ತೋಟಗಾರಿಕೆ, ಇತರೆ ಇಲಾಖೆಯ ವಸ್ತು ಪ್ರದರ್ಶನದ ಮಳಿಗೆ ತೆರೆಯಲಾಗಿತ್ತು. ರೈತರು ಬೆಳೆದಿರುವ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರ ಬೆಳೆಗಳನ್ನು ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.
ವೈನ್ ಮೇಳ: ಕೊಡಗಿನಲ್ಲಿ ಉತ್ಪಾದಿಸುವ ಉತ್ಪನ್ನವಾಗಿರುವ ಕೊಡಗಿನ ಹೋಂ ಮೇಡ್ ವೈನ್ ಅನ್ನು ಉತ್ತೇಜಿಸುವ ಸಲುವಾಗಿ ಫಲಪುಷ್ಪ ಪ್ರದರ್ಶನ ಜತೆಗೆ ವೈನ್ ಉತ್ಸವ ಕೂಡ ಆಯೋಜಿಸಲಾಗಿತ್ತು. ವೈನ್ ಉತ್ಸವದಲ್ಲಿ ವಿವಿಧ ಹಣ್ಣುಗಳಿಂದ ತಯಾರಿಸಿದ ವೈನ್‌ಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಮೇಳದಲ್ಲಿ ವೈನ್ ಮಾಡುವ ವಿಧಾನವನ್ನು ತಿಳಿಸುವ ನಿಟ್ಟಿನಲ್ಲಿ ಪರಿಕರಗಳ ಪ್ರದರ್ಶನ ಗಮನ ಸೆಳೆಯಿತು.
ನಾಲ್ಕುನಾಡು ಅರಮನೆ ಮಾಹಿತಿ
ನಾಲ್ಕುನಾಡು ಅರಮನೆ ಕೊಡಗು ಜಿಲ್ಲೆಯ ಅತ್ಯಂತ ದೊಡ್ಡ ಬೆಟ್ಟ ತಡಿಯಂಡಮೋಳ್ ಬುಡದಲ್ಲಿದೆ. ಟಿಪ್ಪು ಸುಲ್ತಾನನ ಮೇಲೆ ಡೊಡ್ಡವೀರ ರಾಜೇಂದ್ರನ ವಿಜಯದ ನೆನಪಿಗಾಗಿ ಈ ಅರಮನೆಯನ್ನು ೧೭೯೨ರ ಅವಧಿಯಲ್ಲಿ ನಿರ್ಮಿಸಲಾಗಿತ್ತು. ಬ್ರಿಟಿಷರಿಂದ ಪದಚ್ಯುತಗೊಳ್ಳುವ ಮೊದಲು ಈ ಅರಮನೆ ಹಾಲೇರಿ ರಾಜರ ಕೊನೆಯ ರಾಜ ಚಿಕ್ಕವೀರ ರಾಜೇಂದ್ರನ ಕೊನೆಯ ಆಶ್ರಯವಾಗಿತ್ತು. ಕೊಡಗನ್ನು ಆಳಿದ ರಾಜರ ಪರಂಪರೆಯನ್ನು ಬಿಂಬಿಸುವ ಸಲುವಾಗಿ ಈ ಕಲಾಕೃತಿಯನ್ನು ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ.
ಚುನಾವಣಾ ಜಾಗೃತಿ
ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಕೂಡ ನಡೆಯಲಿರುವ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮ ಪ್ರತಿಯೊಬ್ಬರನ್ನು ಸೆಳೆಯಿತು. ಗುಲಾಬಿಯಿಂದ ಕರ್ನಾಟಕ ರಾಜ್ಯದ ಚಿತ್ರಣ ಹಾಗೂ ಅಭ್ಯರ್ಥಿಗಳ ಪಟ್ಟಿ, ಮತದಾನ ಮಾಡುವ ಯಂತ್ರವನ್ನು ಹೂವುಗಳಿಂದ ರಚಿಸಲಾಗಿತ್ತು.
ಎಲ್ಲೆಡೆ ಸೆಲ್ಫಿ
ಫಲಪುಷ್ಪ ಪ್ರದರ್ಶನದಲ್ಲಿ ಆಯೋಜಿಸಿದ್ದ ಕಲಾಕೃತಿಗಳ ಮುಂಭಾಗ ಪುಟಾಣಿ ಮಕ್ಕಳು, ಹುಡುಗರು, ಹುಡುಗಿಯರು ಹಿರಿಯರು ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರೆ, ಕೆಲವರು ಪ್ರೋಫೆಷನಲ್ ಕ್ಯಾಮರಕ್ಕೆ ಪೋಸ್ ಕೊಡುತ್ತಾ ಹೂವಿನೊಂದಿಗೆ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಕೆಲವರು ರಾಜಸೀಟ್‌ನ ವೀವ್ ಪಾಯಿಂಟ್‌ನಲ್ಲಿ ನಿಂತು ಬೆಟ್ಟಗಳ ಸಾಲುಗಳನ್ನು ನೋಡುತ್ತಾ, ತಂಪಾದ ಗಾಳಿಯೊಂದಿಗೆ ಪ್ರಕೃತಿ ಸೌಂದರ್ಯವನ್ನು ಸವಿದರು.
ಫಲಪುಷ್ಪ ಪ್ರದರ್ಶನಕ್ಕೆ ೨೦ ಲಕ್ಷ!
ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಅಂದಾಜು ರೂ.೨೦ ಲಕ್ಷ ವೆಚ್ಚ ಮಾಡಲಾಗಿದೆ. ರಾಜಾಸೀಟು ಉದ್ಯಾನವನದಲ್ಲಿ ೧೦ ರಿಂದ ೧೨ ಸಾವಿರ ಸಂಖ್ಯೆಯ ೧೫-೨೦ ರೀತಿಯ ಹೂವುಗಳಾದ ಪೇಟೂನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಕ್ಯಾಲಾಂಡೂಲಾ, ಪ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಮತ್ತಿತರ ಗಿಡಗಳು ನೋಡುಗರ ಮನ ಸೆಳೆಯಿತು.