ಬಸವಣ್ಣನವರ ನಿಜ ರೂಪದಂತಿದ್ದ ನಾಲ್ವಡಿ: ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪಬಣ್ಣನೆ

5
Published on

ಮೈಸೂರು: ರಾಜರಾಗಿದ್ದರೂ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಯಕ ಶಿಲ್ಪಿಯಾಗಿದ್ದರು ಎಂದು ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ ಬಣ್ಣಿಸಿದರು.

ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಶುಕ್ರವಾರ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಞರಾಜ ಒಡೆಯರ್ ಜನ್ಮ ದಿನೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಬಸವಣ್ಣನವರ ನಿಜ ರೂಪದಂತಿದ್ದ ನಾಲ್ವಡಿ ಅವರು, ಅಭಿವೃದ್ಧಿಯ ಹರಿಕಾರ. ಸಂಸ್ಕೃತಿ ಉಳಿವಿಗೆ ಶ್ರಮಿಸಿ, ವೈಚಾರಿಕ ನೆಲೆಗಟ್ಟಿನಲ್ಲಿ ಬದುಕಿನುದ್ದಕ್ಕೂ ನಡೆದರು. ಶೋಷಿತರ, ದಮನಿತರ ಪರವಾಗಿದ್ದು, ಕಾಯಕಕ್ಕೆ ಮಹತ್ವ ನೀಡಿದ್ದರು. ಆದರ್ಶ ಅನುಕರಣೀಯ ವ್ಯಕ್ತಿಯಾದರು. ನೂರಕ್ಕೂ ಹೆಚ್ಚಿನ ಯೋಜನೆ ಜಾರಿಗೆ ತಂದಿದ್ದರು ಎಂದು ಸ್ಮರಿಸಿದರು.

ದೇಶದಲ್ಲಿ ಅನೇಕ ಮಹಾರಾಜರಿದ್ದರು. ಅವರು ನೀಡಿದ ಕೊಡುಗೆ ಎಲ್ಲರಿಗೂ ಗೊತ್ತು. ಅದರೆ ಸಮಾಜಮುಖಿ, ದೂರದೃಷ್ಟಿ ಕೆಲಸ ಮಾಡವ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವರ ಪಟ್ಟಿಯಲ್ಲಿ ಮೊದಲಿಗರಾಗಿ ಕೃಷ್ಣರಾಜ ಒಡೆಯರ್ ನಿಲ್ಲುತ್ತಾರೆ. ಅವರನ್ನು ನೆನಪು ಮಾಡಿಕೊಳ್ಳುವುದು ಒಂದು ಸುಯೋಗ ಎಂದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿರುವರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ. ಸಮಾಜದ ಹಿರಿಯರನ್ನು ಸತ್ಕರಿಸುವ ಕಾರ್ಯ ಒಳ್ಳೆಯದು. ಈ ನಿಟ್ಟಿನಲ್ಲಿ ಬಸವೇಶ್ವರ ಪ್ರತಿಷ್ಠಾನ ತೊಡಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಆರ್.ನಟರಾಜ್ ಜೋಯ್ಸ ಅವರಿಗೆ ನಾಲ್ವಡಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಪುಷ್ಪನಮನ ಸಲ್ಲಿಸಿದರು.

ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಬಸವರಾಜೇಂದ್ರಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net