ಬದಲಾವಣೆಯಿಂದ ನೆಮ್ಮದಿ ಜೀವನ

anekal
Published on

 ವಿಜಯವಾಣಿ ಸುದ್ದಿಜಾಲ ಆನೇಕಲ್

ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ಆದಾಗ ಮಾತ್ರ ಜನ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಸಂಸದ ಡಾ.ಮಂಜುನಾಥ್ ಹೇಳಿದರು.

ಇಗ್ಗಲೂರು ಗ್ರಾಮದ ಬಳಿ 200 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಕಾಮಗಾರಿ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದರು. ಆರೋಗ್ಯ ಕ್ಷೇತ್ರದಲ್ಲಿ ಭಾರತ ಕ್ರಾಂತಿಯನ್ನೇ ಮಾಡುತ್ತಿದೆ, ಈ ನಿಟ್ಟಿನಲ್ಲಿ ದೇಶ ಮುಂಚೂಣಿಯಲ್ಲಿದೆ ಎಂದರು. ಆಯುಷ್ಮಾನ್ ಭಾರತ್ ಯೋಜನೆ ಖಾಸಗಿ ಆಸ್ಪತ್ರೆಗಳಲ್ಲೂ ಸಿಗಬೇಕು ಇದಕ್ಕೆ ರಾಜ್ಯ ಸರ್ಕಾರ ಕೆಲವು ಬದಲಾವಣೆಗಳನ್ನು ತಂದು ಹೆಚ್ಚಿನ ಸಹಕಾರ ನೀಡಬೇಕಿತ್ತು ಇದು ಆದಾಗ ಇನ್ನಷ್ಟು ಸಹಕಾರಿ ಆಗಲಿದೆ ಎಂದರು. ಎರಡುವರೆ ವರ್ಷದಲ್ಲಿ ಆಸ್ಪತ್ರೆಯ ಕಾಮಗಾರಿ ಮುಗಿಸುವ ಭರವಸೆ ನೀಡಲಾಗಿದೆ ಎಂದರು.

ತಾಲೂಕಿಗೆ ಸಂದ ಗೌರವ: 289 ಕೋಟಿ ರೂ.ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ 200 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಈ ಹಿಂದೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮವಿದೆ, ಈ ಸಂದರ್ಭದಲ್ಲಿ ಅವರನ್ನು ನೆನಪು ಮಾಡಿಕೊಳ್ಳಬೇಕು ಎಂದು ಶಾಸಕ ಬಿ.ಶಿವಣ್ಣ ಹೇಳಿದರು. ಆಸ್ಪತ್ರೆ ನಿರ್ಮಾಣ ಆಗುತ್ತಿರುವ ಜಾಗವನ್ನು ಕಸಾಯಿ ಖಾನೆ ಮಾಡಬೇಕು ಎಂದು ನಿರ್ಧಾರ ಮಾಡಲಾಗಿತ್ತು, ಆದರೆ ಇದರ ವಿರುದ್ಧ ಹೋರಾಟ ನಡೆಸಿ ಈಗ ಆಸ್ಪತ್ರೆ ನಿರ್ಮಾಣ ಆಗುತ್ತಿರುವುದು ತಾಲೂಕಿಗೆ ಸಂದ ಗೌರವ ಎಂದರು. ಚಂದಾಪುರ ಪುರಸಭಾ ವ್ಯಾಪ್ತಿಯ ಇಗ್ಗಲೂರು ಬಳಿ ಆಸ್ಪತ್ರೆ ನಿರ್ಮಾಣ ಆಗುತ್ತಿದ್ದು ಮೋದಿ ಇದಕ್ಕೆ ಶಿಲನ್ಯಾಸ ನೆರವೇರಿಸಿರುವುದು ನಮ್ಮ ಸೌಭಾಗ್ಯವಾಗಿದೆ, ಆದಷ್ಟು ಬೇಗ ಇದರ ಸೇವೆ ದೊರೆಯುವಂತಾಗಲಿ ಎಂದು ಪುರಸಭಾ ಅಧ್ಯಕ್ಷೆ ಶಾರದಾ ವರದರಾಜು ಹೇಳಿದರು.

ಹಿಂದೆಯೇ ಮಂಜೂರಾಗಬೇಕಿತ್ತು: ನಮ್ಮ ಭಾಗಕ್ಕೆ ಈ ಹಿಂದೆಯೇ ಆಸ್ಪತ್ರೆ ಮಂಜೂರಾಗಬೇಕಿತ್ತು, ಆದರೆ ಕೆಲವು ರಾಜಕೀಯ ಕಾರಣದಿಂದ ವಿಳಂಬವಾಗಿತ್ತು ಎಂದು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಸಾದ್ ಹೇಳಿದರು. ಆದಷ್ಟು ಬೇಗ ಕಾಮಗಾರಿ ಮುಗಿದು ಈ ಭಾಗದ ಕಾರ್ಮಿಕರಿಗೆ ಸಹಾಯ ಆಗಬೇಕು, ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಣಮಟ್ಟ ಕಾಪಾಡಿಕೊಳ್ಳುವುದು ಅತ್ಯವಶ್ಯಕ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net