

ಹಾಸನ: ಬಸವಣ್ಣ ಅವರು 12ನೇ ಶತಮಾನದಲ್ಲೇ ಅನುಭವ ಮಂಟಪ ನಿರ್ಮಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ್ದರು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಚನ್ನರಾಯಪಟ್ಟಣ ತಾಲೂಕು ಆಡಳಿತದಿಂದ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶನಿವಾರ ಸಾಂಸ್ಕೃತಿ ನಾಯಕ ಬಸವಣ್ಣನ ಅವರ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದರು. ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣ ಅವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿ ಅವರ ಭಾವಚಿತ್ರವನ್ನು ವಿಧಾನಸೌಧದ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು ಆದೇಶ ಹೊರಡಿಸಿದೆ. ಅದರಂತೆ ಯೇ ಮಿನಿ ವಿಧಾನಸೌಧದಲ್ಲಿ ಅಳವಡಿಸಲಾಗಿದೆ ಎಂದರು. ಬಸವಣ್ಣನ ಅವರ ಧಾರ್ಮಿಕ ಹಾಗೂ ಸಾಮಾಜಿಕ ಚಳವಳಿಗಳು ಇಂದಿಗೂ ಪ್ರಸ್ತುತವಾಗಿವೆ.
12ನೇ ಶತಮಾನದಲ್ಲಿ ಬಸವ ಕಲ್ಯಾಣವನ್ನು ಕೇಂದ್ರವಾಗಿರಿಸಿಕೊಂಡು ಮೂರು ದಶಕಗಳ ಕಾಲ ಅಸಮಾನತೆಯನ್ನು ಹೊಗಲಾಡಿಸಲು ಬಸವಣ್ಣನವರು ಶ್ರಮಿಸಿದ್ದರು. ಬಸವ ತತ್ವಗಳನ್ನು ಕಾಯ, ವಾಚ, ಮಾನಸ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು. ಸಮಾಜದಲ್ಲಿ ಜಾತೀಯತೆ ಹೋಗಲಾಡಿಸಲು ಪ್ರತಿಯೊಬ್ಬರೂ ಕೈಜೋಡಿ ಸಬೇಕು. ಅಸಮಾನತೆ ಹೋಗದ ಹೊರತು ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಿಲ್ಲ.
ತಮ್ಮ ವಚನಗಳ ಮೂಲಕ ಸಮಾಜಕ್ಕೆ ದಾರಿ ತೋರಿದ ಬಸವಣ್ಣನವರು ಜಾತೀಯತೆ ಯನ್ನು ಮೆಟ್ಟಿ ನಿಂತು ಸಮಾಜಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಇಂದು ಅವರ ಜಯಂತಿ ಆಚರಿಸುವ ಮೂಲಕ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಲು ಸಂಕಲ್ಪ ಮಾಡೋಣ ಎಂದು ಹೇಳಿದರು. ತಹಸೀಲ್ದಾರ್ ಬಿ.ಎಂ. ಗೋವಿಂದರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಎನ್.ಪರಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಪಿ.ನಂದೀಶ, ಖಜಾಂಚಿ ಎಂ.ಎಸ್. ಸುರೇಶ್, ಪದಾಧಿಕಾರಿಗಳಾದ ಚನ್ನೇಗೌಡ , ಜಯಕೀರ್ತಿ, ಯುವ ಘಟಕದ ಅಧ್ಯಕ್ಷ ಎನ್.ಎಸ್. ಗುರುಪ್ರಸಾದ್, ಉಪಾಧ್ಯಕ್ಷ ಸತೀಶ್, ಹೇಮಂತ್ , ಕಾರ್ಯದರ್ಶಿ ಶಿವಾನಂದ್, ಜಿಲ್ಲಾ ಖಜಾಂಚಿ ಆರ್. ರುದ್ರಸ್ವಾಮಿ ಇತರರಿದ್ದರು.