

ಗೌರಿಬಿದನೂರು : ತಾಲೂಕಿನ ಗೆದರೆ ವ್ಯವಸಾಯ ಸೇವಾ ಸಹಕಾರದ ಸಂಘದ ಚುನಾವಣೆಯಲ್ಲಿ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಬಣ ಮುಖಭಂಗ ಅನುಭವಿಸಿದ್ದು, ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ನೇತೃತ್ವದ ಕಾಂಗ್ರೆಸ್ ಹಾಗೂ ಜಿಪಂ ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಬಣ ಗೆಲುವು ಸಾಧಿಸಿದೆ.
ಸಂಘದ 12 ನಿರ್ದೇಶಕರ ಸ್ಥಾನಗಳ ಪೈಕಿ ಠೇವಣಿದಾರರ ಕ್ಷೇತ್ರದಿಂದ ಜಿ.ಸಿ. ಸತೀಶ್ ಅವಿರೋಧ ಆಯ್ಕೆಯಾಗಿದ್ದರು. ಉಳಿದ 11 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಸೀತಾರಾಮ್, ಸಾಮಾನ್ಯ ಕ್ಷೇತ್ರದಿಂದ ಜಮದ್‌ಖಾನ್, ಜಿ.ಎನ್.ಕೃಷ್ಣಾರೆಡ್ಡಿ, ಶ್ರೀರಾಮಯ್ಯ, ಜಿ.ಎನ್. ಬಸವರಾಜ್, ಮಹಿಳಾ ಕ್ಷೇತ್ರದಿಂದ ಪದ್ಮಾವತಮ್ಮ, ಬಿಸಿಎಂ-ಬಿ ಕ್ಷೇತ್ರದಿಂದ ಶ್ರೀನಿವಾಸ್ ರೆಡ್ಡಿ, ಬಿಸಿಎಂ-ಎ ಕ್ಷೇತ್ರದಿಂದ ಲಕ್ಷ್ಮೀಪತಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ತಿಪ್ಪಕ್ಕ, ಪರಿಶಿಷ್ಟ ಪಂಗಡದಿಂದ ರಾಮನಾಯಕ್ ಆಯ್ಕೆಯಾಗಿದ್ದಾರೆ.
ಶಾಸಕರ ಬಣಕ್ಕೆ ಲಾಟರಿ ಲಕ್ಷ್ಮೀ
ಅವಿರೋಧವಾಗಿ ಆಯ್ಕೆಯಾದ ಜಿ. ಸಿ. ಸತೀಶ್ ಹಾಗೂ ಗೆದ್ದಿರುವ 10 ನಿರ್ದೇಶಕರು ಮಾಜಿ ಸಚಿವ ಶಿವಶಂಕರರೆಡ್ಡಿ ಬಣಕ್ಕೆ ಸೇರಿದವರಾಗಿದ್ದಾರೆ. ಉಳಿದ ಮಹಿಳಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ನಿರ್ಮಲಾ ಹಾಗೂ ಯಶೋದಮ್ಮ ಇಬ್ಬರೂ ತಲಾ 51 ಮತ ಪಡೆದಿದ್ದರಿಂದ ಚುನಾವಣಾಧಿಕಾರಿ ಎನ್. ಶಿವಲಿಂಗಪ್ಪ ಲಾಟರಿ ಮೂಲಕ ಆಯ್ಕೆಗೆ ಮೊರೆ ಹೋದರು. ಲಾಟರಿಯಲ್ಲಿ ಅದೃಷ್ಟ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಬಣದ ನಿರ್ಮಲಾ ಅವರಿಗೆ ಒಲಿಯಿತು.
ವಿರೋಧಿಗಳ ಪ್ರತಿತಂತ್ರ -ಶಾಸಕರ ಬಣಕ್ಕೆ ಸೋಲು
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಬಣದ ಗೆಲುವಿಗೆ ಜಿಪಂ ಮಾಜಿ ಅಧ್ಯಕ್ಷ ಎಚ್.ವಿ. ಮಂಜುನಾಥ್ ಪ್ರಮುಖ ಪಾತ್ರ ವಹಿಸಿದ್ದರು. ಚುನಾವಣೆ ಬಳಿಕ ಇಬ್ಬರೂ ಅಂತರ ಕಾಯ್ದುಕೊಂಡಿದ್ದರು. ಈಗ ಸ್ಥಳೀಯ ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳುವ ವ್ಯವಸಾಯ ಸೇವಾ ಸಹಕಾರ ಸಂಘ ಚುನಾವಣೆಯಲ್ಲಿ ಮಾಜಿ ಸಚಿವ ಶಿವಶಂಕರರೆಡ್ಡಿ ಹಾಗೂ ಎಚ್.ವಿ ಮಂಜುನಾಥ್ ನೇತೃತ್ವದ ಬಣ ಒಂದಾಗಿ ಶಾಸಕ ಪುಟ್ಟಸ್ವಾಮಿಗೌಡ ಬಣದ ವಿರುದ್ಧ ತಂತ್ರ ರೂಪಿಸಿ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗೆಲುವಿನಿಂದಾಗಿ ಶಿವಶಂಕರ ರೆಡ್ಡಿ ಹಾಗೂ ಎಚ್.ವಿ.ಮಂಜುನಾಥ್ ಒಂದಾಗುತ್ತಾರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ವಿಶ್ವಾಸ ಕಳೆದುಕೊಂಡರೇ ಕೆಎಚ್‌ಪಿ?
ಮಾಜಿ ಸಚಿವ ಶಿವಶಂಕರರೆಡ್ಡಿ ಮಾತನಾಡಿ, ಶಾಸಕರ ಬಣದವರು ಚುನಾವಣೆಗೆ ಹಣದ ಹೊಳೆಯನ್ನೇ ಹರಿಸಿದರು. ಆದರೆ ಜನ ಹಣಕ್ಕೆ ಕಿಮ್ಮತ್ತು ನೀಡಲಿಲ್ಲ. ಕಾಂಗ್ರೆಸ್ ಹಾಗೂ ಮಂಜುನಾಥ್ ಅನುಯಾಯಿಗಳನ್ನು ಒಳಗೊಂಡ ಸಿಂಡಿಕೇಟ್‌ಗೆ ಅಭೂತಪೂರ್ವ ಗೆಲುವು ನೀಡಿದ್ದಾರೆ. ಶಾಸಕ ಪುಟ್ಟಸ್ವಾಮಿಗೌಡರು ಅಧಿಕಾರಕ್ಕೆ ಬಂದ ಬಳಿಕ ಗೆಲುವಿಗೆ ಕಾರಣರಾದ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಈ ಚುನಾವಣೆ ಫಲಿತಾಂಶ ಸಾಕ್ಷಿಯಾಗಿದೆ. ಮುಂಬರುವ ಚುನಾವಣೆಗಳಿಗೆ ಈ ಲಿತಾಂಶ ದಿಕ್ಸೂಚಿಯಾಗಿದೆ ಎಂದರು.
ಸ್ಥಳೀಯ ಮುಖಂಡರ ಸ್ವಾಭಿಮಾನ ಮತ್ತು ರಾಜಕೀಯ ಅಸ್ತಿತ್ವಕ್ಕಾಗಿ ಈ ಚುನಾವಣೆಯಲ್ಲಿ ಹೋರಾಟ ನಡೆಸಲಾಯಿತು. ಹೋರಾಟದಲ್ಲಿ ಯಶಸ್ವಿಯಾಗಿ ಗೆಲುವು ಸಾಧಿಸಲಾಗಿದೆ. - ಎಚ್.ವಿ. ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷ ವಿಧಾನಸಭಾ ಚುನಾವಣೆ ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತು ಸಂಘದ ಚುನಾವಣೆಯಲ್ಲಿ ಸಿಂಡಿಕೇಟ್ ರಚಿಸಿಕೊಂಡಿದ್ದೆವು. ಜನ ನಮ್ಮ ಮೇಲೆ ವಿಶ್ವಾಸವಿರಿಸಿ ಗೆಲುವು ನೀಡಿದ್ದಾರೆ. - ಜಿ.ಸಿ.ಸತೀಶ್, ನೂತನ ನಿರ್ದೇಶಕ