

ವಿಜಯವಾಣಿ ಸುದ್ದಿಜಾಲ ಧಾರವಾಡ
ಮರಗಳು ಮನುಷ್ಯರಿಗೆ ಪ್ರಕೃತಿ ನೀಡಿದ ವರ. ಮರಗಳು ಭೂಲೋಕದ ಕಲ್ಪ ವೃಕ್ಷಗಳಿದ್ದಂತೆ. ಅರಣ್ಯ ಉಳಿಸಿ ಬೆಳೆಸುವುದರ ಹಿಂದೆ ಮಾನವನ ಕಲ್ಯಾಣ ಅಡಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.
ಇಲ್ಲಿನ ಶಾಲ್ಮಲಾ ನಗರದ ಜೈ ಹಿಂದ ಪ್ರೌಢ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯಗಳು ಪ್ರಕೃತಿ ಪ್ರಿಯರಿಗೆ ಸ್ವರ್ಗ. ಅನೇಕ ಕಾಡು ಪ್ರಾಣಿಗಳಿಗೆ ಆಶ್ರಯ ತಾಣವಾಗಿದ್ದು, ಸಕಲ ಜೀವರಾಶಿಗೂ ಬೇಕಾದ ಶುದ್ಧ ಗಾಳಿ, ನೀರು, ಆಹಾರ, ಔಷಧ, ಇತರ ಜೀವನಾವಶ್ಯಕ ಪದಾರ್ಥಗಳನ್ನು ನೀಡುತ್ತಾ ಬಂದಿವೆ. ಆಧುನಿಕತೆ ನೆಪದಲ್ಲಿ ಪರಿಸರ ನಾಶ ಮಾಡುವುದು ಸಲ್ಲದು. ವಿದ್ಯಾರ್ಥಿಗಳು ಈ ದಿಸೆಯಲ್ಲಿ ಬಾಲ್ಯದಿಂದಲೇ ಪ್ರಕೃತಿಯ ಆರಾಧಕರಾಗಬೇಕು ಎಂದರು.
ವೀರಣ್ಣ ಒಡ್ಡೀನ ಮಾತನಾಡಿ, ಪ್ರಕೃತಿ ಮನುಷ್ಯನ ಆಸೆ ಈಡೇರಿಸುತ್ತದೆಯೇ ವಿನಃ ದುರಾಸೆಯನ್ನಲ್ಲ. ಮಾನವನ ದುರಾಸೆಯಿಂದ ಕಾಡು ವ್ಯಾಪಕವಾಗಿ ನಾಶವಾಗುತ್ತಿದೆ. ಭಾರತದಲ್ಲಿ ಸದ್ಯ ಶೇ. ೧೦ರಷ್ಟು ಮಾತ್ರ ಅರಣ್ಯವಿದ್ದು, ಇದು ಪರಿಸರದ ಅಸಮತೋಲನೆಗೆ ಕಾರಣವಾಗುತ್ತಿದೆ. ವಿದ್ಯಾರ್ಥಿಗಳು ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಮಹಾಂತೇಶ ನರೇಗಲ್ಲ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಲು ಶ್ರಮಿಸಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಕೆ.ಜಿ. ದೇವರಮನಿ, ಎಂ.ಎಸ್. ಫರಾಸ್, ಪ್ರಮೀಳಾ ಜಕ್ಕಣ್ಣವರ, ಮೇಘಾ ಹುಕ್ಕೇರಿ, ಡಾ. ರವಿಕುಮಾರ ಪೂಜಾರ, ಡಾ. ಸಂತೋಷಕುಮಾರ ಪೂಜಾರ, ಬಿ.ಜಿ. ಶಿವಳ್ಳಿ, ಉಮೇಶ ಹುದ್ದಾರ. ಎನ್.ಬಿ. ಪತ್ತಾರ, ಎಂ.ಎಸ್. ಧುಮಗೊಂಡ, ಮೇಘನಾ ಬಿ.ಎನ್, ಜಿ.ಆರ್. ಫಡ್ನೀಸ್, ಜ್ಯೋತಿ ಸತ್ತಿಗೇರಿ, ಎಸ್.ವಿ. ಜೋಶಿ, ಎಸ್.ಎಂ. ಬುಟ್ಟಣ್ಣವರ, ಆರ್.ಬಿ. ಕೋಲಕಾರ, ಇತರರು ಇದ್ದರು.