

ಲೋಕೇಶ್ ಎಂ. ಐಹೊಳೆ ಜಗಳೂರು
ರಂಗಯ್ಯನದುರ್ಗ ಅಭಯಾರಣ್ಯ ಅಪರೂಪದ ಪ್ರಾಣಿ, ಪಕ್ಷಿ, ಸಸ್ಯ ಸಂಕುಲ, ಸಂಪತ್ತಿನ ತಾಣ. ಇದರ ಮೇಲೀಗ ಕಳ್ಳರ ಕಾಕದೃಷ್ಟಿ ಬಿದ್ದು ಕಂಟಕ ಎದುರಾಗಿ ಇದರ ಸಂರಕ್ಷಣೆ ಸವಾಲಾಗಿ ಪರಿಣಮಿಸಿದೆ.
ಜಗಳೂರು ತಾಲೂಕಿನ ರಂಗಯ್ಯನದುರ್ಗ ಕೊಂಡುಕುರಿ ಅಭಯಾರಣ್ಯ ಸುಮಾರು 7,723,72 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದ್ದು, ನೂರಾರು ಜಾತಿ ಮರಗಳು, ವನ್ಯಜೀವಿಗಳ ಆವಾಸ ತಾಣವಾಗಿದೆ.
ವಿಶೇಷವಾಗಿ ಅತ್ಯಂತ ಸೂಕ್ಷ ್ಮ ಹಾಗೂ ವಿನಾಶದಂಚಿನ ಅತ್ಯಪರೂಪದ ಕೊಂಡುಕುರಿಗಳ ಆವಾಸಸ್ಥಾನ ಈ ಅರಣ್ಯ ಪ್ರದೇಶ. ಈ ಅಭಯಾರಣ್ಯದಲ್ಲಿ ಮನುಷ್ಯರು ಓಡಾಡುವುದೇ ಕಷ್ಟ. ಅಂಥದ್ದರಲ್ಲಿ ಎಗ್ಗಿಲ್ಲದೇ ಮರಗಳ ಮಾರಣ ಹೋಮ ನಡೆಯುತ್ತಿರುವುದು ಬೆಳಕಿಗೆ ಬಂದರೂ ಅರಣ್ಯ ಇಲಾಖೆ ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆ ವರ್ತಿಸುತ್ತಿದೆ.
ತಾರೇಹಳ್ಳಿ ವ್ಯಾಪ್ತಿಯಲ್ಲಿ ಮರಗಳು ನಾಶ:
ಮೂವತ್ತೆಂಟಕ್ಕೂ ಅಧಿಕ ಹಳ್ಳಿಗಳು ರಂಗಯ್ಯನದುರ್ಗ ಅರಣ್ಯ ಪ್ರದೇಶದ ಅಂಚಿನಲ್ಲಿವೆ. ಎಲ್ಲ ಕಡೆ ಮರಗಳ ಕಡಿತಲೆ ಮತ್ತು ಮರಳು ಗಣಿಗಾರಿಕೆ ದಂಧೆ ನಡೆಯುತ್ತಿದೆ. ಅದರಲ್ಲೂ ತಾರೇಹಳ್ಳಿ ಕೆರೆಯ ಹಿಂಭಾಗದಲ್ಲಿ ಸಾಲು ಸಾಲು ಮರಗಳು ಕಡಿದು ಹಾಕಲಾಗಿದೆ. ಹಗಲು- ರಾತ್ರಿ ಎನ್ನದೇ ನಿರಂತರವಾಗಿ ಮರಗಳ ಸಾಗಾಟ ನಡೆದರೂ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೆ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಪಕ್ಕದಲ್ಲಿ ಹರಿದುಹೋಗಿರುವ ಹಳ್ಳದಲ್ಲಿ ಸಾಕಷ್ಟು ಮರಳು ಸಂಗ್ರಹವಾಗಿತ್ತು. ಆದರೆ, ಇದೀಗ ಎಲ್ಲವನ್ನೂ ಲಾರಿ, ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗಿದೆ ಎಂಬುದು ಗ್ರಾಮಸ್ಥರ ದೂರು.
ಅರಣ್ಯಾಧಿಕಾರಿಗಳ ಲೋಪದ ಆರೋಪ:
ರಂಗಯ್ಯನದುರ್ಗದ ಆರ್‌ಎಫ್‌ಒ ಮಹೇಶ್ ನಾಯ್ಕ ಅವರ ಕರ್ತವ್ಯಲೋಪವೇ ಅರಣ್ಯದಲ್ಲಿ ಮರಗಳ ಕಡಿತಲೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮರ ಕಡಿದು ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಹೋಗುವ ವಿಡಿಯೋ, ಫೋಟೊಗಳು ಸಂಗ್ರಹವಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವನ್ಯಜೀವಿ ಪರಿಸರ ಪ್ರೇಮಿಗಳ ಆರೋಪಿಸಿದ್ದಾರೆ.
ಬೆಲೆ ಬಾಳುವ ಮರಗಳು, ಅಕ್ರಮವಾಗಿ ಮರಳು ಸಾಗಾಟ ತಮ್ಮ ಕಾಲುಬುಡದಲ್ಲೇ ನಡೆಯುತ್ತಿದ್ದರೂ ಏನೂ ಗೊತ್ತಿಲ್ಲದಂತೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಂತೆ ವರ್ತಿಸುತ್ತಿದ್ದಾರೆ. ಇದು ಅಕ್ರಮ ಎಸಗುವವರ ಜತೆಗೆ ಕೈ ಜೋಡಿಸಿದ್ದಾರಾ? ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಸಂಬಂಧಿತ ಮೇಲಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಣ್‌ಗುಪ್ಪೆ ಗ್ರಾಮಸ್ಥರಾದ ನಾಗರಾಜ್ ಒತ್ತಾಯಿಸಿದ್ದಾರೆ.
ಅರಣ್ಯದಲ್ಲಿ ಮರ ಕಡಿದಿಲ್ಲ. ಇತ್ತೀಚೆಗೆ ತಾರೇಹಳ್ಳಿಯ ಒಬ್ಬ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಮರಳು ಗಣಿಗಾರಿಕೆಗೆ ನಡೆಯುತ್ತಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನಿತ್ಯವೂ ಸುತ್ತಾಡುತ್ತಿದ್ದೇವೆ. ಅಂತಹ ಘಟನೆ ಕಂಡುಬಂದಿಲ್ಲ. ಹಾಗೇನಾದರೂ ಸಿಕ್ಕರೆ ಕ್ರಮ ಕೈಗೊಳ್ಳುತ್ತೇವೆ.
- ಮಹೇಶ್‌ನಾಯ್ಕ, ಆರ್‌ಎಫ್‌ಒ ರಂಗಯ್ಯದುರ್ಗ ಅರಣ್ಯ ವಲಯ.
ರಂಗಯ್ಯದುರ್ಗ ಕೊಂಡುಕುರಿ ಅರಣ್ಯ ಪ್ರದೇಶವು ರಾಜ್ಯದಲ್ಲಿ ವಿಶೇಷ ಗಮನ ಸೆಳೆದಿದೆ. ಅಲ್ಲಿರುವ ಅಪರೂಪದ ಕೊಂಡುಕುರಿ ವಾಸವಿರುವುದು ನಮ್ಮ ತಾಲೂಕಿನ ಸೌಭಾಗ್ಯ. ಆದರೆ, ಅರಣ್ಯದ ಸುತ್ತಲು ಮರಗಳ ಕಡಿತ ಹೆಚ್ಚಾಗುತ್ತಿದೆ. ಇದರಿಂದ ಪ್ರಾಣಿ ಸಂಕುಲಕ್ಕೆ ತೊಂದರೆ ಆಗುತ್ತದೆ. ಅರಣ್ಯ ಇಲಾಖೆ ಸಚಿವರು, ಅಧಿಕಾರಿಗಳು ಇದರ ಬಗ್ಗೆ ಕಾಳಜಿ ವಹಿಸಿ ರಕ್ಷಣೆ ಮಾಡಬೇಕಾಗಿದೆ.
-ಬಿ. ಬಸವರಾಜ್, ಸಿದ್ದಮ್ಮನಹಳ್ಳಿ.