

ಬ್ಯಾಡಗಿ: ತಾಲೂಕಿನ ಶಿಡೇನೂರು, ತಡಸ, ಬಿದರಕಟ್ಟೆ, ಕಾಟೇನಹಳ್ಳಿ ಗ್ರಾಮಗಳ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ, ಚಿರತೆ ಸೆರೆ ಹಿಡಿಯಲು ಬೋನು ಇಟ್ಟಿದೆ.
ಕಳೆದೊಂದು ವಾರದಿಂದ ಚಿರತೆ ಹೊಲಗಳಲ್ಲಿ ಕಾಣಿಸಿಕೊಂಡು, ಆಕಳು, ಕುರಿ, ಮೇಕೆ ತಿಂದು ಹಾಕಿ ಆತಂಕ, ಭಯ ಹುಟ್ಟಿಸಿತ್ತು.
ಈ ಕುರಿತು ‘ವಿಜಯವಾಣಿ’ ಶುಕ್ರವಾರ ‘ಚಿರತೆ ಕಾಟ ರೈತರಿಗೆ ಪ್ರಾಣ ಸಂಕಟ’ ಶೀರ್ಷಿಕೆಯಡಿ ವಿಸ್ತ್ರತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು, ಕಾಟೇನಹಳ್ಳಿ, ಶಿಡೇನೂರು ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಚಿರತೆ ಬಂಧನಕ್ಕೆ ಬೋನು ಅಳವಡಿಸಿತು. ಸುತ್ತಲಿನ ರೈತರಿಗೆ ತಿಳಿವಳಿಕೆ ಹಾಗೂ ಮಾಹಿತಿ ನೀಡುವ ಮೂಲಕ ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ರೈತರಲ್ಲಿ ಆತಂಕ ಬೇಡ:
ಈ ಕುರಿತು ಮಾಹಿತಿ ನೀಡಿದ ಅರಣ್ಯಾಧಿಕಾರಿ ವಸಂತ ಪಾಟೀಲ, ನಾಲ್ಕಾರು ಗ್ರಾಮಗಳ ಸುತ್ತ ಚಿರತೆ ಓಡಾಡುತ್ತಿರುವ ಕುರಿತು ಗ್ರಾಮಸ್ಥರು ಮಾಹಿತಿ ತಿಳಿಸಿದ್ದು, ನಮ್ಮ ಸಿಬ್ಬಂದಿ ಅಲ್ಲಲ್ಲಿ ಓಡಾಡುತ್ತಿದ್ದಾರೆ. ಜನರ ಕಣ್ಣು ತಪ್ಪಿಸಿ ಓಡಾಡುತ್ತಿರುವ ಚಿರತೆ ಸೆರೆಗೆ ಒತ್ತಾಯ ಕೇಳಿಬಂದಿದೆ. ಮೇಕೆ ತಿಂದ ಜಾಗದ ಕೆಲದೂರದಲ್ಲಿ ಬೋನು ಇಡಲಾಗಿದೆ ಎಂದು ತಿಳಿಸಿದ್ದಾರೆ.