ಫಲಾನುಭವಿಗಳಿಗೆ ಸವಲತ್ತು ತಲುಪಿಸಲು ಅರಣ್ಯ ಇಲಾಖೆ ವಿಫಲ: ಸಚಿವ ಜೆ.ಸಿ.ಮಾಧುಸ್ವಾಮಿ

4
Published on

ಪಾವಗಡ: ಫಲಾನುಭವಿಗಳಿಗೆ ಸವಲತ್ತು ತಲುಪಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಪಟ್ಟಣದ ತುಮಕೂರು ರಸ್ತೆ ಮಾರ್ಗದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪಕ್ಕದಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ಪೊಲೀಸ್ ಇಲಾಖೆಗಿಂತ ಅರಣ್ಯ ಇಲಾಖೆ ಬಗ್ಗೆ ಹೆಚ್ಚು ದೂರುಗಳು ಬರುತ್ತಿವೆ. ನಾನು ವೃಕ್ಷಪ್ರೇಮಿಯಾಗಿದ್ದು, ಪ್ರಕೃತಿಗಿಂತ ದೊಡ್ಡದು ಯಾವುದೂ ಇಲ್ಲ, ಕುಡಿಯುವ ನೀರಿನ ಬಾಟಲಿಗಳನ್ನು ಕೈಯಲ್ಲಿಟ್ಟುಕೊಂಡು ಹೋಗುವ ಕಾಲ ಬರುತ್ತದೆ ಎಂದು ಹಿಂದಿನವರು ಅಪಹಾಸ್ಯ ಮಾಡುತ್ತಿದ್ದರು, ಮುಂದೊಂದು ದಿನ ಮನುಷ್ಯ ಉಸಿರಾಡಲು ಆಮ್ಲಜನಕದ ಸಿಲಿಂಡರ್‌ಗಳನ್ನು ಕೈಯಲ್ಲಿಟ್ಟುಕೊಳ್ಳುವ ಕಾಲ ಸನ್ನಿಹಿತವಾಗುತ್ತಿದೆ, ಆದ್ದರಿಂದ ಪರಿಸರ ನಾಶವಾಗದಂತೆ ಕಾಪಾಡಬೇಕು ಎಂದರು.

ಪಾರ್ಕ್‌ಗೆ ಬರುವವರಿಗೆ ಗಿಡಕೊಟ್ಟು ಪೋಷಿಸಲು ಸೂಚಿಸಿ, ಇಲ್ಲಿ ಹಣ್ಣು ಮತ್ತು ನೆರಳು ಕೊಡುವ ಗಿಡಗಳನ್ನು ಹೆಚ್ಚಾಗಿ ಬೆಳೆಸಿ ಎಂದರು.

ಸಹಾಯಕ ಅರಣ್ಯಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಕೆ.ಆರ್.ನಾಗರಾಜ್, ಜಿಪಂ ಸದಸ್ಯ ಕೆ.ಎಸ್. ಪಾಪಣ್ಣ, ವಲಯ ಅರಣ್ಯಾಧಿಕಾರಿ ಎಚ್.ಎಂ.ಸುರೇಶ್, ಪುರಸಭೆ ಮುಖ್ಯಾಧಿಕಾರಿ ಜಿ.ನವೀನ್ ಚಂದ್ರ, ತಾಪಂ ಅಧ್ಯಕ್ಷೆ ಮಾಳಮ್ಮ, ಉಪಾಧ್ಯಕ್ಷ ಐ.ಜೆ.ನಾಗರಾಜ್, ಪುರಸಭಾ ಅಧ್ಯಕ್ಷ ರಾಮಾಂಜಿನಪ್ಪ, ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ, ವಿ.ನಾಗಭೂಷಣರೆಡ್ಡಿ, ಬಿಜೆಪಿ ತಾಲೂಕು ಅಧ್ಯಕ್ಷ ರವಿಶಂಕರ್‌ನಾಯ್ಕ , ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿ ಇದ್ದರು.

ನೀರಾವರಿ ಯೋಜನೆಗೆ ಅರಣ್ಯ ಇಲಾಖೆ ಅಡ್ಡಿ:ಅರಣ್ಯ ಇಲಾಖೆ ರಸ್ತೆ ಪಕ್ಕದಲ್ಲಿ ಹೊಂಗೆ ಮತ್ತು ಹಿಪ್ಪುನೇರಳೆ ಗಿಡಗಳನ್ನು ಬೆಳೆಸಲು ಮುಂದಾಗಬೇಕು, ಬೆಟ್ಟ-ಗುಡ್ಡಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಬೇಕು. ತಾಲೂಕಿನಲ್ಲಿ ತುಂಗಭದ್ರಾ ಯೋಜನೆಯ ಪೈಪ್‌ಲೈನ್ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಶಾಸಕ ವೆಂಕಟರವಣಪ್ಪ ಸಚಿವರ ಗಮನಕ್ಕೆ ತಂದರು.

ವೈ.ಎನ್.ಹೊಸಕೋಟೆ, ನಿಡಗಲ್ ಹೋಬಳಿಯಲ್ಲಿ ಹೆಚ್ಚು ಅರಣ್ಯ ಪ್ರದೇಶವಿದ್ದು, ಈ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಕಾಡು ಪ್ರಾಣಿಗಳು ಕುಡಿಯಲು ನೀರಿನ ವ್ಯವಸ್ಥೆ ಮಾಡಲು ಚೆಕ್ ಡ್ಯಾಂ ಮತ್ತು ಗೋಕಟ್ಟೆಗಳನ್ನು ನಿರ್ಮಿಸಬೇಕು. ವೆಂಕಟರವಣಪ್ಪ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net