ತೋಟ ಹಾಳುಗೆಡವಿದ ಅರಣ್ಯ ಇಲಾಖೆ

sdp Forest
Published on

ಸಿದ್ದಾಪುರ: ತಾಲೂಕಿನ ಕುಣಜಿ ಗ್ರಾಮದಲ್ಲಿನ ನಮ್ಮ ವಹಿವಾಟಿನಲ್ಲಿರುವ ಬೆಟ್ಟ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡದೆ, ಪೂರ್ವ ಸೂಚನೆ ನೀಡದೆ ಅಕ್ರಮ ಪ್ರವೇಶ ಮಾಡಿ ಅಲ್ಲಿ ಬೆಳೆಸಿದ್ದ 3-4 ವರ್ಷದ ಅಡಕೆ, ತೆಂಗು ಹಾಗೂ ಹಣ್ಣು, ಹಂಪಲುಗಳ ಗಿಡಗಳನ್ನು ಕಡಿದು ನಾಶ ಮಾಡಿ, ಲಕ್ಷಾಂತರ ರೂ. ವ್ಯಯಿಸಿ ಅಳವಡಿಸಿದ್ದ ಪೈಪ್​ಲೈನ್​ಗಳನ್ನು ಹಾಳುಗೆಡವಿದ್ದಾರೆ. ಇದು ರೈತರ ಮೇಲಿನ ದೌರ್ಜನ್ಯವಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ತಲೆದಂಡಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕುಣಜಿ ಗ್ರಾಮದ ತನುಜಾ ಪ್ರಕಾಶ ಗೌಡರ್, ಚನ್ನಬಸಪ್ಪ ಎಂ. ಗೌಡರ್, ಮಲ್ಲಸರ್ಜ ಗುರುನಾಥ ಗೌಡರ್ ಸೇರಿದಂತೆ ವಿವಿಧೆಡೆಯ ರೈತರು ಆಗ್ರಹಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತನುಜಾ ಗೌಡರ್, ನಾವು ಮೂರು ಕುಟುಂಬದವರು ಕುಣಜಿ ಗ್ರಾಮದ ನಿವಾಸಿಗಳಾಗಿದ್ದು, ಅಲ್ಲಿ ಸ್ವಂತ ಮಾಲೀಕತ್ವ, ಕಬ್ಜಾ ಇರುವ ಭಾಗಾಯ್ತ ಜಮೀನು ಹೊಂದಿದ್ದೇವೆ. ಅವುಗಳಿಗೆ ಕೆನರಾ ಪ್ರಿವಿಲೇಜ್ ಕಾನೂನು ಪ್ರಕಾರ ಸರ್ಕಾರಿ ಬೆಟ್ಟಗಳನ್ನು ಉಪಯೋಗಕ್ಕೆ ಬಿಡಲಾಗಿದೆ. ಈ ಬೆಟ್ಟ ಭೂಮಿ ಪೋಡಿ ಕೂಡ ಆಗಿವೆ. ಈ ಬೆಟ್ಟಗಳಿಂದ ಸೊಪ್ಪು, ಮಣ್ಣು, ದರಕು ಮುಂತಾಗಿ ಬಳಸಿಕೊಂಡು ಬರುತ್ತಿದ್ದು, ಮಣ್ಣು ತೆಗೆದ ಜಾಗಗಳಲ್ಲಿ ಅಡಕೆ, ತೆಂಗು, ಹಣ್ಣು-ಹಂಪಲು, ಕಾಡು ಜಾತಿಯ ಗಿಡಗಳನ್ನು ನೆಟ್ಟು ಬೆಳೆಸಲಾಗಿತ್ತು. ಜುಲೈ 2ರ ಬೆಳಗ್ಗೆ 6 ಗಂಟೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಪೂರ್ವಸೂಚನೆ, ನೋಟಿಸ್ ನೀಡದೆ ತಮ್ಮ 25-30 ಮಂದಿ ಸಿಬ್ಬಂದಿಯೊಂದಿಗೆ ಬಂದು ಗಿಡಗಳನ್ನು ಕಡಿದು, ಬುಡಸಮೇತ ಕಿತ್ತುಹಾಕಿದ್ದಾರೆ. ಪೈಪ್​ಲೈನ್ ಹಾಳುಗೆಡವಿ ವಾಹನದಲ್ಲಿ ಸಾಗಿಸಿದ್ದಾರೆ. ವಿಷಯ ತಿಳಿದ ನಾವು ಸ್ಥಳಕ್ಕೆ ಹೋಗಿ ವಿನಂತಿಸಿಕೊಂಡರೂ ಅದಕ್ಕೆ ಪ್ರತಿಕ್ರಿಯಿಸದೆ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದರು.

ಮಲ್ಲಸರ್ಜ ಗೌಡರ್ ಮಾತನಾಡಿ, ಕೆನರಾ ಪ್ರಿವಿಲೇಜ್ ಕಾಯ್ದೆ ಪ್ರಕಾರ ಬೆಟ್ಟ ಹಕ್ಕುದಾರರು ನಿಯಮ ಉಲ್ಲಂಘನೆ ಮಾಡಿದರೆ ಕಂದಾಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ವಸಾಹತು ಅಧಿಕಾರಿ, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬಹುದು. ನಮ್ಮ ಹಕ್ಕಿನ ಬೆಟ್ಟದಲ್ಲಿ ವ್ಯತಿರಿಕ್ತವಾಗಿ ನಡೆದುಕೊಳ್ಳದೇ ಸಾಗುವಳಿ ಮಾಡುತ್ತಿರುವ ನಮ್ಮ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸಿದೆ. ಕಾನೂನಿಗೆ ವಿರುದ್ಧವಾಗಿ ಅತಿಕ್ರಮಣ ಮಾಡಿದವರು, ಅತಿಕ್ರಮಣ ಮಾಡಿ ಮನೆ ಕಟ್ಟಿದವರು ಸಾಕಷ್ಟು ಮಂದಿ ಇದ್ದರೂ ಸುಮ್ಮನಿರುವ ಅರಣ್ಯಾಧಿಕಾರಿಗಳು ಕಾನೂನುಬದ್ಧವಾಗಿರುವ ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ನಮಗೆ ನಷ್ಟ ಭರಿಸಿಕೊಡಬೇಕು ಎಂದು ಒತ್ತಾಯಿಸಿದರು.

ಅನಿವಾರ್ಯವಾದರೆ ರೈತರು ಕಾನೂನು ಹೋರಾಟಕ್ಕೂ ಸಿದ್ಧ ಎಂದು ಅವರು ಹೇಳಿದರು.

ಕುಣಜಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಶಿವಕುಮಾರ, ತಾಪಂ ಮಾಜಿ ಅಧ್ಯಕ್ಷ ಸುಧೀರ ಗೌಡರ್, ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಸಾಬ್, ಜಿಲ್ಲಾ ಪ್ರಮುಖ ಶಿವಲಿಂಗಯ್ಯ ಅಲ್ಲಯ್ಯನವರ, ಪರಮೇಶ್ವರಯ್ಯ ಕಾನಳ್ಳಿಮಠ, ಸಿ.ಎಸ್. ಗೌಡರ್ ಮತ್ತಿತರರು ದೌರ್ಜನ್ಯವನ್ನು ವಿರೋಧಿಸಿ ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಬಸವರಾಜ ಚಕ್ರಸಾಲಿ, ನಾಗರಾಜ ದೋಶೆಟ್ಟಿ, ಕುಮಾರ ಗೌಡರ್ ಮತ್ತಿತರರಿದ್ದರು.

ಅರಣ್ಯ ಇಲಾಖೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದಂತೆ, ಮುಂದಿನ ದಿನಗಳಲ್ಲಿ ಅಸಹಾಯಕ ರೈತರೆಲ್ಲರ ಮೇಲೂ ಆಗಬಹುದು. ಆದ್ದರಿಂದ ಈ ಕುರಿತು ಎಲ್ಲ ರೈತರು ಆಲೋಚಿಸಿ ಒಗ್ಗಟ್ಟಾಗಬೇಕು. ದೌರ್ಜನ್ಯ ನಡೆಸಿದ ಅಧಿಕಾರಿಗಳ ತಲೆದಂಡವಾಗುವವರೆಗೂ ಹೋರಾಡುತ್ತೇವೆ. ಇದಕ್ಕೆ ಎಲ್ಲರ ಬೆಂಬಲ ಕೋರುತ್ತೇವೆ. | ತನುಜಾ ಗೌಡರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net