ಮಡಿಕೇರಿಯಲ್ಲಿ ಜಾನಪದ ದಸರಾದ ರಂಗು

the folk Dasara in Madikeri
Published on

ಮಡಿಕೇರಿ:

ಪದ್ಧತಿ, ಪರಂಪರೆ ಆಚರಣೆ ಒಂದು ದಿನಕ್ಕೆ ಸೀಮಿತವಾಗದೆ ಬದುಕಿನಲ್ಲಿ ಅಡಕವಾಗುವಂತಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯಪಟ್ಟರು. ದಸರಾ ಹಿನ್ನೆಲೆಯಲ್ಲಿ ಮಡಿಕೇರಿ ಕಲಾಸಂಭ್ರಮ ವೇದಿಕೆಯಲ್ಲಿ ಗುರುವಾರ ನಡೆದ ೩ನೇ ವರ್ಷದ ಜಾನಪದ ದಸರಾ ಉದ್ಘಾಟಿಸಿ ಮಾತನಾಡಿದರು.

ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಆಗಬೇಕು. ಮೊದಲು ನಾವು ಸಂಸ್ಕೃತಿ ಅನುಸರಿಸಿದರೆ ಮುಂದಿನ ತಲೆಮಾರಿಗೆ ತಲುಪಿಸಬಹುದು. ಎಲ್ಲಾ ಕಡೆಯಲ್ಲೂ ಭಾಷೆ ಬೇರೆ ಬೇರೆ ಇರಬಹುದು. ಆದರೆ ಜಾನಪದೀಯ ಸಂಸ್ಕೃತಿಯಲ್ಲಿ ಸ್ವಾಮ್ಯತೆ ಇದೆ ಎಂದರು.

ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷರೂ ಆಗಿರುವ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ ಮರೆತು ಹೋಗುತ್ತಿರುವ ಆಚಾರ, ವಿಚಾರ, ಪದ್ಧತಿ ಪರಂಪರೆ ಮುಂದಕ್ಕೆ ತೆಗದುಕೊಂಡು ಹೋಗುವ ಕೆಲಸ ಇಂಥ ಕಾರ್ಯಕ್ರಮಗಳಿಂದ ಆಗುತ್ತಿದೆ. ಜಾನಪದ ಸಂಸ್ಕೃತಿ ಮುಂದುವರಿಸುವಲ್ಲಿ ಪೋಷಕರ ಪಾತ್ರ ದೊಡ್ಡದು ಎಂದು ಹೇಳಿದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ. ಜಿ. ಅನಂತಶಯನ ಮಾತನಾಡಿ, ಜಾನಪದರು ಹೃದಯ ಶ್ರೀಮಂತರು. ಆದರೆ ಇದು ಇಂದು ಅಳಿದು ಹೊಗುತ್ತಿದೆ. ಹಳ್ಳಿಗಾಡಿನ ಜಾನಪದ ಶ್ರೀಮಂತಿಕೆ ಉಳಿದುಕೊಳ್ಳಬೇಕು. ಇಂಗ್ಲೀಷರು ಭಾರತಕ್ಕೆ ಬಂದಾಗ ಭಾರತೀಯರನ್ನು ಕೇವಲ ತೋಳ್ಬಲದಿಂದ ಮಾತ್ರ ಮಣಿಸಲು ಸಾಧ್ಯವಿಲ್ಲ ಎಂದು ಮನಗಂಡು ಇಲ್ಲಿಯ ವಿದ್ಯಾ ಕ್ಷೇತ್ರ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹಾಳು ಮಾಡಲು ಪ್ರಯತ್ನಿಸಿದರು. ಆದರೆ ಗಟ್ಟಿಯಾಗಿದ್ದ ಜಾನಪದದ ಬೇರುಗಳನ್ನು ಏನೂ ಮಾಡಲು ಆಗಲಿಲ್ಲ. ಹಾಗಾಗಿ ಜಾನಪದರು ಸಂಸ್ಕೃತಿ ಉಳಿಸಿಕೊಂಡು ಬಂದರು ಎಂದರು.

ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿದರು. ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ,ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ದಸರಾ ಸಮಿತಿ ಖಜಾಂಚಿ ಅರುಣ್ ಶೆಟ್ಟಿ, ಮಡಿಕೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ನಗರಸಭೆ ಸದಸ್ಯೆ ಶಾರದಾ, ಜಿಲ್ಲಾ ಜಾನಪದ ಪರಿಷತ್ತು ಕಾರ್ಯದರ್ಶಿ ಮುನೀರ್ ಅಹಮ್ಮದ್, ಖಜಾಂಚಿ ಎಸ್.ಎಸ್. ಸಂಪತ್ ಕುಮಾರ್, ಅಂಬೆಕಲ್ ಕುಶಾಲಪ್ಪ ಹಾಗೂ ತಾಲೂಕು ಘಟಕಗಳ ಅಧ್ಯಕ್ಷರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net