

ಅಂಕೋಲಾ: ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಅವರು ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ನಾವು ನಡೆಸಿದ ಬಹುತೇಕ ಹೋರಾಟಗಳಲ್ಲಿ ಅವರು ಒಬ್ಬರಾಗಿದ್ದಳು. ಪದ್ಮಶ್ರೀಗಿಂತ ನನಗೆ ನನ್ನ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಬಯಕೆ ಅವಳಲ್ಲಿತ್ತು. ಆದರೆ, ಈಗ ಆಕೆಯ ಅಕಾಲಿಕ ಮರಣ ನಮ್ಮ ಸಮುದಾಯ ಮತ್ತು ಜಾನಪದ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಹೇಳಿದರು.
ಬೆಳಂಬಾರದ ತಮ್ಮ ಮನೆಯಂಗಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾನಪದ ಕೋಗಿಲೆ ದಿ. ಸುಕ್ರಿ ಗೌಡ ಅವರ ಸವಿನೆನಪಿಗಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಇಸ್ರೋದಲ್ಲಿ ನೇಮಕವಾಗಿರುವ ಕೋಕಿಲ ಗೌಡ ಮತ್ತು ನಾಡೋಜ ಎಚ್.ಎಲ್. ನಾಗೇಗೌಡ ಪ್ರಶಸ್ತಿ ವಿಜೇತ ಜಾನಪದ ಕಲಾವಿದೆ ಲಕ್ಷ್ಮೀ ಗೌಡ ಇವರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಹಿರಿಯ ಪತ್ರಕರ್ತ ವಿಠ್ಠಲದಾಸ ಕಾಮತ ಮಾತನಾಡಿ, ಸುಕ್ರಿ ಗೌಡ ಅವರು ಕೇವಲ ಜಾನಪದ ಕ್ಷೇತ್ರಕ್ಕೆ ಮಾತ್ರ ಸೀಮಿತವಾದವರಲ್ಲ, ಬದಲಾಗಿ ಸಾರಾಯಿ ವಿರೋಧಿ ಆಂದೋಲನ, ಅರಣ್ಯ ಸಕ್ರಮ ಹೋರಾಟದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪದ್ಮಶ್ರೀಯಂತಹ ಪ್ರಶಸ್ತಿಗಳು ದೊರೆತಾಗಲೂ ಯಾವ ಅಹಂಕಾರವೂ ಇಲ್ಲದೇ ಬದುಕಿದ ಬಡ ಜೀವವದು ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ ಸಂಚಾಲಕ ಉಮೇಶ ಎನ್. ನಾಯ್ಕ ನಿರ್ವಹಿಸಿದರು. ಸಣ್ಣಮ್ಮ ಬೊಮ್ಮು ಗೌಡ, ತುಳಸಿ ಬುದ್ಧು ಗೌಡ, ಮಂಕಾಳಿ ಗೌಡ, ಸಣ್ಣು ಗೌಡ ಇತರರು ಉಪಸ್ಥಿತರಿದ್ದರು. ಲಕ್ಷ್ಮೀ ಗೌಡ ನೇತೃತ್ವದಲ್ಲಿ ಅವರನ್ನು ನೆನೆದು ಜಾನಪದ ಹಾಡನ್ನು ಹೇಳುವ ಮೂಲಕ ಗಮನ ಸೆಳೆದರು.