

ಹುಬ್ಬಳ್ಳಿ : ಇಲ್ಲಿನ ಹೊಸೂರು ವೃತ್ತದಿಂದ ಹಳೇ ಕೋರ್ಟ್ ವೃತ್ತದವರೆಗಿನ 651 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಮೂರು ತಿಂಗಳೊಳಗೆ ಈ ಕಾಮಗಾರಿ ಸೇರಿದಂತೆ ಕೆಳಭಾಗದ ಸಿಸಿ ರಸ್ತೆಯನ್ನು ಸಹ ಅಭಿವೃದ್ಧಿಪಡಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು.
ಮೇಲ್ಸೇತುವೆ ಪರಿಶೀಲನೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಆಕ್ಷನ್ ಪ್ಲ್ಯಾನ್ ಪ್ರಕಾರ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಹ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಏಪ್ರಿಲ್ 20ರಂದು ಈ ಭಾಗದ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಒಂದು ತಿಂಗಳಲ್ಲಿ 17 ಗಲ್ಡರ್ಗಳನ್ನು ಸ್ಥಾಪಿಸಿದ್ದು, ಕಾಮಗಾರಿ ವೇಗ ಪಡೆದುಕೊಂಡಿದೆ ಎಂದರು.
ಈ ಭಾಗ ಹೆಚ್ಚು ವಾಹನ ದಟ್ಟಣೆಯಿಂದ ಕೂಡಿದ್ದು, ಉತ್ತಮ ವ್ಯಾಪಾರ ನಡೆಯುವ ಸ್ಥಳವಾಗಿದೆ. ಇಲ್ಲಿನ ವ್ಯಾಪಾರಸ್ಥರ ಮನವೊಲಿಸಿ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಮನ್ವಯತೆಯಿಂದ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಒಟ್ಟು 80 ಗ್ಲಡರ್ಗಳ ಪೈಕಿ 17 ಸ್ಥಾಪಿಸಾಗಿದೆ. ಈ ಭಾಗದಲ್ಲಿ ಒಂದು ಮೀಟರ್ ಎತ್ತರದಲ್ಲಿ ಮೇಲ್ಸೇತುವೆ ನಿರ್ವಿುಸಲಾಗುತ್ತಿದೆ. ನಿರಂತರ ಮಳೆಯಾದರು ಸಹ ಕಾಮಗಾರಿ ಮುಂದುವರೆದಿದೆ.
ಯುಜಿಡಿ, ಎಲ್ ಆಂಡ್ ಟಿ ಸಮಸ್ಯೆಗಳು ಬಗೆ ಹರಿದಿವೆ. ಅತಿಕ್ರಮಣ ಇದ್ದರೆ ಅದನ್ನು ತೆರವುಗೊಳಿಸುವಂತೆ ಪಾಲಿಕೆಗೆ ಸೂಚನೆ ನೀಡಲಾಗಿದೆ. ಚನ್ನಮ್ಮ ವೃತ್ತದಿಂದ ಲ್ಯಾಮಿಂಗ್ಟನ್ ರಸ್ತೆಯ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿ ಭೂಸ್ವಾದೀನ ಪ್ರಕ್ರಿಯೆ ಮುಗಿದು ಹಣ ವರ್ಗಾವಣೆ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದೆ ಎಂದರು.
ಪಾಲಿಕೆ ಸದಸ್ಯ ಭೀರಪ್ಪ ಖಂಡೇಕರ, ಬಿಜೆಪಿ ಮುಖಂಡ ವೆಂಕಟೇಶ ಕಾಟವೆ, ರವಿ ನಾಯಕ, ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿ ಡಿ.ಸಿ. ಸಿದ್ದಲಿಂಗೇಶ್ವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಅಭಿಯಂತರ ಟಿ. ಪ್ರದೀಪ್, ಡಿಸಿಪಿ ರವೀಶ ಸಿ.ಆರ್. ಹಾಗೂ ಇತರರು ಹಾಜರಿದ್ದರು.