ನಾಡಿಗೆ ಹಿಗ್ಗು ತಂದ ಮಸೂತಿಯ ಮೊಗ್ಗು

gls 22-2a
ಹೆತ್ತವರಿಂದ ಸಿಹಿ ತಿನ್ನುತ್ತಿರುವ ರಾಹುಲ್ ಯರಂತೇಲಿ
Published on

ಡಿ.ಬಿ. ಕುಪ್ಪಸ್ತ ಗೊಳಸಂಗಿ: ಸಾಹಿತ್ಯಿಕ, ಧಾರ್ಮಿಕ, ಶೈಕ್ಷಣಿಕ, ಆಧ್ಯಾತ್ಮಿಕ ರಂಗಗಳಲ್ಲಿ ತನ್ನದೇ ಛಾಪು ಮೂಡಿಸಿದ್ದ ಕೊಲ್ಹಾರ ತಾಲೂಕು ಮಸೂತಿ ಗ್ರಾಮ ಪ್ರಸ್ತುತ ಯುಪಿಎಸ್‌ಸಿ(ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್) ಪರೀಕ್ಷೆಯಲ್ಲಿ ತಮ್ಮೂರಿನ ಮಗನಿಗೆ 462ನೇ ರ‌್ಯಾಂಕ್ ತಂದು ಕೊಡುವ ಮೂಲಕ ಮತ್ತೊಮ್ಮೆ ಹೆಸರುವಾಸಿಯಾಗಿದೆ.

ಮಸೂತಿ ಗ್ರಾಮದ ಒಂದು ಬಡ ರೈತ ಕುಟುಂಬದಲ್ಲಿ ಜನಿಸಿದ್ದ ಚನ್ನಪ್ಪ ಯರಂತೇಲಿ ತಮ್ಮ ಸ್ವಪ್ರಯತ್ನದಿಂದ ಶಿಕ್ಷಕರಾಗಿ ಪ್ರಸ್ತುತ ಮುದ್ದೇಬಿಹಾಳ ತಾಲೂಕಿನ ಗೋನಾಳ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗಿರುವ ಮೂವರು ಮಕ್ಕಳಲ್ಲಿ ಚೊಚ್ಚಲ ಪುತ್ರ ರಾಹುಲ್ ಯರಂತೇಲಿ ಪ್ರಸ್ತುತ ಯುಪಿಎಸ್‌ಸಿ ಪರೀಕ್ಷೆಯಲ್ಲಿ 462ನೇ ರ‌್ಯಾಂಕ್ ಪಡೆಯುವ ಮೂಲಕ ಹೆತ್ತವರ, ಹುಟ್ಟಿ ಬೆಳೆದ ಮಸೂತಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.

ರಾಹುಲ್ ಶಿಕ್ಷಣದ ಹೆಜ್ಜೆ: ಒಂದರಿಂದ ಐದನೇ ತರಗತಿಯನ್ನು ಮುದ್ದೇಬಿಹಾಳ ತಾಲೂಕಿನ ಇನಚಗಲ್ಲ ಗ್ರಾಮದಲ್ಲಿ ಪೂರೈಸಿದ ರಾಹುಲ್ 6 ರಿಂದ ಪಿಯುಸಿವರೆಗೆ ಆಲಮಟ್ಟಿಯ ನವೋದಯ ಶಾಲೆಯಲ್ಲಿ ಮುಗಿಸಿ ನಂತರ ಬೆಂಗಳೂರಿನ ಎಂ.ವಿ. ಜವರಾಮ್ ಕಾಲೇಜಿನಲ್ಲಿ ಬಿಇ ಪದವಿ ಮುಗಿಸಿದ್ದಾರೆ. ಆ ಬಳಿಕ ಡಾ. ರಾಜಕುಮಾರ್ ಅಕಾಡೆಮಿ ಸಿವಿಲ್ ಸರ್ವಿಸ್‌ನಲ್ಲಿ ಐಎಎಸ್ ಕೋಚಿಂಗ್ ತರಬೇತಿ ಪಡೆದಿದ್ದಾರೆ.

ಮಸೂತಿಯಂತ ಪುಟ್ಟ ಗ್ರಾಮದಲ್ಲಿ ಜನಿಸಿದ್ದರೂ ದಟ್ಟವಾದ ಕನಸಿನ ಮೂಟೆ ಹೊತ್ತುಕೊಂಡಿದ್ದ ರಾಹುಲ್ ಇಂದು ಅಗಾಧ ಸಾಧನೆ ಮೆರೆದಿದ್ದನ್ನು ಕಂಡು ಶಿಕ್ಷಕ ಚನ್ನಪ್ಪನವರಿಗೆ ಚಿನ್ನದಂತ ಮಗ ಹುಟ್ಟಿ ಮಸೂತಿ ಗ್ರಾಮದ ಹೆಸರು ನಾಡಿನಾದ್ಯಂತ ಪಸರಿಸುವಂತೆ ಮಾಡಿದ್ದನ್ನು ಕಂಡು ಇಡೀ ಮಸೂತಿ ಗ್ರಾಮದಲ್ಲಿ ಎಲ್ಲೆಲ್ಲೂ ಸಂತಸ ಮನೆ ಮಾಡಿದೆ.

ನಮ್ಮೂರಿನ ಯುವಕ ರಾಹುಲ್ ಯರಂತೇಲಿ ಯುಪಿಎಸ್‌ಸಿಯಲ್ಲಿ 462ನೇ ರ‌್ಯಾಂಕ್ ಗಳಿಸಿರುವುದು ನಮಗೆಲ್ಲ ಖುಷಿ ತಂದಿರುವ ವಿಚಾರ. ಈ ಅಭೂತಪೂರ್ವ ಪ್ರತಿಭೆಯಿಂದ ನಮ್ಮೂರಿನ ಕೀರ್ತಿ ಪತಾಕೆ ನಾಡಿನಾದ್ಯಂತ ಮೊಳಗಿದಂತಾಗಿದೆ.

ವಿಶ್ವನಾಥ ಹಿರೇಮಠ, ಮಸೂತಿ ಗ್ರಾಮಸ್ಥರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net