

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ ಧಾರವಾಡ ಸಹಯೋಗದಲ್ಲಿ ಶ್ರವಣ ಮತ್ತು ಮಾತು ಪರಿಶೀಲನೆ ಉಚಿತ ಶಿಬಿರ ನಡೆಯಿತು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಶಿಬಿರ ಉದ್ಘಾಟಿಸಿ, ಮಾನವ ಶರೀರ ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಪಂಚೇಂದ್ರಿಯಗಳೇ ಮೂಲ ಸಾಧನ. ಎಲ್ಲ ಅಂಗಗಳ ಬಗ್ಗೆ ಕಾಳಜಿ ಹೊಂದಿರುವ ಮಾನವ ಕಿವಿಗಳ ಬಗ್ಗೆ ನಿರ್ಲಕ್ಷೃ ತೋರಿಸುತ್ತಾನೆ. ಪಂಚೇಂದ್ರಿಯಗಳಲ್ಲಿ ಒಂದಕ್ಕೆ ಲೋಪವಾದರೂ ಇತರ ಇಂದ್ರಿಯಗಳ ಮೇಲೆ ಪರಿಣಾಮ ಬೀರಬಲ್ಲದು. ಆದ್ದರಿಂದ ಶ್ರವಣದೋಷದ ಬಗ್ಗೆ ನಿರ್ಲಕ್ಷ ಬೇಡ ಎಂದರು.
ಧಾರವಾಡದ ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ವಾಕ್ ಮತ್ತು ಶ್ರವಣತಜ್ಞ ಡಾ.ವಸೀಮ್ ಮಾತನಾಡಿ, ಅತಿಯಾದ ಹೆಡ್‌ಪೋನ್ ಬಳಕೆ ಮತ್ತು ಡಿಜೆ ಸೌಂಡ್ ಶ್ರವಣ ದೋಷಕ್ಕೆ ಕಾರಣವಾಗುತ್ತಿದೆ. ಶ್ರವಣದೋಷ ನಿವಾರಣೆ ಕ್ಲಿಷ್ಟಕರವಾದದ್ದು. ಕೇಳುವ ಸಾಮರ್ಥ್ಯ ಎಷ್ಟು ಮತ್ತು ಯಾವುದು ಹಿತ ಎಂಬುದನ್ನು ಅರಿತು ಚಿಕಿತ್ಸೆ ನೀಡಬೇಕಾಗುತ್ತದೆ ಎಂದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು.
ಎರಡು ದಿನ ನಡೆದ ಉಚಿತ ಶಿಬಿರದಲ್ಲಿ ಉಜಿರೆ ಎಸ್.ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞ ಡಾ. ರೋಹನ್ ಎಂ.ದೀಕ್ಷಿತ್, ಧಾರವಾಡದ ಎಸ್.ಡಿ.ಎಂ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯ ವಾಕ್ ಮತ್ತು ಶ್ರವಣ ತಜ್ಞ ಡಾ. ವಸೀಮ್ ಮತ್ತು 8 ಮಂದಿಯ ತಂಡ ಮಾತು, ಭಾಷೆ ಮತ್ತು ಶ್ರವಣ ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸಿತು. 150ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ಭಾರತ ಸರ್ಕಾರದ ಎ.ಡಿ.ಐ.ಪಿ ಯೋಜನೆಯಡಿ ಶ್ರವಣ ಉಪಕರಣಗಳನ್ನು ಪಡೆಯಲು ಅಗತ್ಯವಿರುವ ದಾಖಲೆಗಳ ಕುರಿತು ಮಾರ್ಗದರ್ಶನ ನೀಡಲಾಯಿತು. ಸೃಜನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್ ಪಿ. ಉಪಸ್ಥಿತರಿದ್ದರು.