ಕರೊನಾ ಸವಾಲಿನಲ್ಲಿ ಮೊದಲ ಹಂತದ ಯಶಸ್ಸು

corona
Published on

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಮೊದಲ ಹಂತದ ಸವಾಲುಗಳನ್ನು ಎದುರಿಸಿ ಯಶಸ್ಸು ಸಾಧಿಸಲಾಗಿದೆ. ಕರೊನೋತ್ತರ ದಿನಗಳಲ್ಲಿ ಆತ್ಮನಿರ್ಭರ ಭಾರತ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಮತ್ತಷ್ಟು ಪ್ರಾಬಲ್ಯ ಸಾಧಿಸಲಿದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಶನಿವಾರ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಕೆನರಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪರ್ಕಳ ಹಾಗೂ ಸಹಕಾರಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಡಾ. ಟಿ.ಎಂ.ಎ ಪೈ ಖಾಸಗಿ ಆಸ್ಪತ್ರೆಯನ್ನು ಕೋವಿಡ್ ನೋಡಲ್ ಆಸ್ಪತ್ರೆಯಾಗಿ ಬಳಸಿಕೊಳ್ಳಲಾಗಿದೆ. ಕರೊನಾ ಸಂದರ್ಭದಲ್ಲಿ ಉಚಿತವಾಗಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಮಾದರಿಯಾಗಿದೆ ಎಂದರು.

ಕರೊನೋತ್ತರ ಕಾಲದಲ್ಲಿ ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರ ಎಂಬ ವಿಷಯದ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನಾ ಮಾತನಾಡಿದರು. ಇದೇ ಸಂದರ್ಭದಲ್ಲಿ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಹಾಗೂ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನಾ ಅವರನ್ನು ಸಮ್ಮಾನಿಸಲಾಯಿತು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕ ಎಂ.ಎಚ್.ವಿಟ್ಠಲ ಶೇರಿಗಾರ್, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ(ಪ್ರಭಾರ) ಅರುಣ್ ಕುಮಾರ್ ಎಸ್.ವಿ., ಪರ್ಕಳದ ಶ್ರೀ ದುರ್ಗಾಪರಮೇಶ್ವರಿ ಕ್ರಿಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಬಿ.ರಾಮಕೃಷ್ಣ ನಾಯಕ್, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಪ್ರಕಾಶ್‌ಚಂದ್ರ ಶೆಟ್ಟಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ್ ಎಸ್.ಪಿ., ಜಿಲ್ಲಾಸಹಕಾರ ಯೂನಿಯನ್‌ನ ನಿರ್ದೇಶಕರಾದ ಶ್ರೀಧರ್, ಮನೋಜ್ ಕರ್ಕೇರ, ಹರೀಶ್ ಕಿಣಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಕೆನರಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಯು.ಮೋಹನ್ ಉಪಾಧ್ಯ ಸ್ವಾಗತಿಸಿದರು. ಶ್ರೀದುರ್ಗಾಪರಮೇಶ್ವರಿ ಸೊಸೈಟಿಯ ಸಿಇಒ ನಿತ್ಯಾನಂದ ಪರ್ಕಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net