ಮೂಲಸೌಕರ್ಯ ಒದಗಿಸುವುದೇ ಮೊದಲ ಆದ್ಯತೆ

MP, Jagaluru,
Published on

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ l ನೂತನ ಸಂಸದರಿಗೆ ಅಭಿನಂದನಾ ಸಮಾರಂಭ

ಜಗಳೂರು: ಆಹಾರ, ನೀರು, ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗ ಇವು ಮೂಲ ಆದ್ಯತೆಗಳಾಗಬೇಕು. ಆಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ತರಳಬಾಳು ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಸಂಸದರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಶೇ.2ರಷ್ಟು ಅನುದಾನ ಮೀಸಲಿಟ್ಟಿರುವುದು ಆತಂಕಕಾರಿ. ದೇಶದಲ್ಲಿ 140 ಕೋಟಿ ಜನಸಂಖ್ಯೆಯಿದ್ದು ಆರೋಗ್ಯ ಕ್ಷೇತ್ರಕ್ಕೆ ಶೇ.2ರಷ್ಟ್ಟು ಅನುದಾನ ಮೀಸಲಿರುಸುವುದು ಯಾವ ದೂರದೃಷ್ಟಿ ? ಎಂದು ಪ್ರಶ್ನಿಸಿದ ಅವರು, ಬೇರೆ ದೇಶಗಳಲ್ಲಿ ಶೇ.10-15ರಷ್ಟು ಅನುದಾನ ಮೀಸಲಿರಿಸಿದೆ ಎಂದು ಟೀಕಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ತ್ರಿಬಲ್ ಇಂಜಿಯನ್ ಸರ್ಕಾರವಿದ್ದು, ಅಭಿವೃದ್ಧಿಗಳ ಕೆಲಸಗಳು ಮಹಾ ಪರ್ವವಾಗಲಿವೆ. ಮುಂದಿನ ದಿನಗಳಲ್ಲಿ ಐಟಿಬಿಟಿ ಕಂಪನಿಗಳು ಕಾಲಿಡಲಿವೆ. ಜಗಳೂರು ಮತ್ತು ಹರಪ್ಪನಹಳ್ಳಿ ಕ್ಷೇತ್ರಗಳಿಗೆ ವಿಶೇಷ ಕಾಳಜಿ ಜತೆಗೆ ಸಾಕಷ್ಟು ಅನುದಾನ ನೀಡುವ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದರು.

ಸಾರ್ವಜನಿಕರ ಅನುಕೂಲಕ್ಕಾಗಿ ಜನತಾ ದರ್ಶನ ಹಮ್ಮಿಕೊಂಡು ಜನರ ಮನೆ ಬಾಗಿಲಿಗೆ ಸರ್ಕಾರದ ಸವಲತ್ತು ಮತ್ತು ಸಮಸ್ಯೆಗೆ ಪರಿಹಾರ ನೀಡಲಾಗುವುದು. ಸಾರ್ವಜನಿಕರ ಭೇಟಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸಂಪರ್ಕ ಕಚೇರಿ ತೆರೆಸಲಾಗುವುದು ಎಂದು ತಿಳಿಸಿದರು.

ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಲೋಕಸಭೆಯಲ್ಲಿ ಕೇವಲ ದಾವಣಗೆರೆ ಕ್ಷೇತ್ರದ ಜನತೆಗೆ ಧ್ವನಿಯಾಗದೆ ರಾಜ್ಯ ಹಾಗೂ ದೇಶದ ಜನರ ಧ್ವನಿಯಾಗಿರುವುದು ನಮ್ಮ ಸೌಭಾಗ್ಯ ಎಂದರು.

ಜಗಳೂರು ಕ್ಷೇತ್ರ ನಜುಂಡಪ್ಪ ವರದಿ ಪ್ರಕಾರ ಅತೀ ಹಿಂದುಳಿದ ಪ್ರದೇಶವಾಗಿದ್ದು, ಸಂಸದರು ಮತ್ತು ಸಚಿವರು ನಮಗೆ ಎರಡು ಕಣ್ಣುಗಳಾಗಿ ಅಭಿವೃದ್ಧಿಗೆ ಸಹಕರಿಸಬೇಕೆಂದರು.

ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ, ಹಿಂದುಳಿದ ವರ್ಗದ ನಾಯಕರಾದ ಸಿದ್ದರಾಮಯ್ಯನವರು ಯಾವುದೆ ಹಣ ಆಸ್ತಿ ಗಳಿಕೆ ಮಾಡಿಲ್ಲ. ಇಂತಹ ವ್ಯಕ್ತಿಯ ಮೇಲೆ ಬಿಜೆಪಿಯವರು ಸುಳ್ಳ ಆಪಾದನೆ ಮಾಡುತ್ತಿದ್ದಾರೆ. ಈ ಬಗ್ಗೆ ನಾವೆಲ್ಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ನಿಲ್ಲಬೇಕು ಎಂದರು.

ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಕಮ್ಮತಹಳ್ಳಿ ಮಂಜಣ್ಣ, ಕೆಪಿಸಿಸಿ ಎಸ್ಟಿ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ್, ಕಲ್ಲೇಶ್‌ರಾಜ್ ಪಾಟೀಲ್, ಕಾಂಗ್ರೆಸ್ ಮುಖಂಡ ಮಹೇಶ್ವರಪ್ಪ, ಗುತ್ತಿದುರ್ಗ ರುದ್ರೇಶ್, ಮಧುಸೂದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net