

ವಿಜಯವಾಣಿ ಸುದ್ದಿಜಾಲ ಧಾರವಾಡ
ಉತ್ತರ ಕರ್ನಾಟಕದಲ್ಲಿ ಮರಾಠಿ ನಾಟಕಗಳು ಹೆಚ್ಚು ಪ್ರಚಲಿತವಾಗಿದ್ದನ್ನು ಕಂಡು ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ ಜಾಗೃತಗೊಳಿಸಲು ಕನ್ನಡದಲ್ಲಿ ನಾಟಕಗಳನ್ನು ಸಿದ್ಧಪಡಿಸಿ ಪ್ರದರ್ಶನ ಮಾಡಿದವರು ಸಕ್ಕರಿ ಬಾಳಾಚಾರ್. ನಾಟಕ ಕಂಪನಿ ಕಟ್ಟಿದವರಲ್ಲಿ ಸಹ ಇವರೇ ಮೊದಲಿಗರು. ಕನ್ನಡದಲ್ಲಿ ಅನೇಕ ಕಾವ್ಯಗಳನ್ನು, ಅನುವಾದ ಹಾಗೂ ಇತರೆ ಕೃತಿಗಳನ್ನು ರಚಿಸಿದ್ದಾರೆ ಎಂದು ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ ಅಧ್ಯಕ್ಷ ಬಾಬುರಾವ್ ಸಕ್ಕರಿ ಹೇಳಿದರು.
ಇಲ್ಲಿನ ಪಂ. ಬಸವರಾಜ ರಾಜುಗುರು ಬಯಲು ರಂಗಮಂದಿರದಲ್ಲಿ ರಂಗಾಯಣ ಹಾಗೂ ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ ಸಹಯೋಗದಲ್ಲಿ ಆಧುನಿಕ ಕನ್ನಡ ರಂಗಭೂಮಿ ದಿನ ನಿಮಿತ್ತ ಆಯೋಜಿಸಿರುವ 3 ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಂತಕವಿಗಳ ಬದುಕು ಬರಹ ಕುರಿತು ಉಪನ್ಯಾಸಕ ಡಾ. ಗುರುನಾಥ ಬಡಿಗೇರ ಮಾತನಾಡಿ, ಬಾಳಾಚಾರ್ ಕೀರ್ತನೆಗಳನ್ನು ರಚಿಸಿ ತಾವೇ ಹಾಡುತ್ತಿದ್ದರು. ಕನ್ನಡದಲ್ಲಿ ಉಷಾಹರಣ ಎಂಬ ಸ್ವತಂತ್ರ ನಾಟಕವನ್ನು ಪ್ರಥಮ ಬಾರಿಗೆ ರಚಿಸಿದ ಕೀರ್ತಿ ಅವರದು. 65ಕ್ಕಿಂತ ಹೆಚ್ಚು ಪುಸ್ತಕಗಳನ್ನು ರಚಿಸುವ ಮೂಲಕ ಆಧುನಿಕ ಕನ್ನಡ ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಅವರ ಸಾಹಿತ್ಯ, ಕೃತಿ ನುಡಿಗಳು ರಂಗಭೂಮಿಗೆ ಪೂರಕವಾಗಿವೆ ಎಂದರು.
ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಗಾಯತ್ರಿ ಮಹಾದೇವ, ರಂಗ ಸಮಾಜ ಸದಸ್ಯ ಮಹಾಂತೇಶ ಗಜೇಂದ್ರಗಡ, ಹನುಮೇಶ ಸಕ್ಕರಿ, ಇತರರು ಇದ್ದರು.
ನಂತರ ಜೋಗಿ ರಚನೆ, ಡಾ.ಪ್ರಕಾಶ ಗರುಡ ನಿರ್ದೇಶನದ ವಿಶ್ವಾಮಿತ್ರ ಮೇನಕೆ ಡಾನ್ಸ ಮಾಡೋದು ಏನಕೆ ನಾಟಕವನ್ನು ಗೊಂಬೆ ಮನೆ ತಂಡ ಪ್ರಸ್ತುತ ಪಡಿಸಿತು. ಶಶಿಕಲಾ ಹುಡೇದ ಸ್ವಾಗತಿಸಿದರು. ಆರತಿ ದೇವಶಿಕಾಮಣಿ ನಿರೂಪಿಸಿದರು.