

ಮೇಲುಕೋಟೆ: ಭೂವೈಕುಂಠ ರಾಮಾನುಜಾಚಾರ್ಯರ ಕರ್ಮಭೂಮಿ ಮೇಲುಕೋಟೆಯ ಸನ್ನಿಧಿಯಲ್ಲಿ ಮೂಲಮೂರ್ತಿ ಚೆಲುವರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಮಹಾಭಿಷೇಕ ವೈಭವದಿಂದ ನೆರವೇರಿತು.
ವೈರಮುಡಿ ಜಾತ್ರಾ ಮಹೋತ್ಸವದ 10ನೇ ತಿರುನಾಳ್ ಅಂಗವಾಗಿ ಯದುಗಿರಿಯ ಅಧಿದೈವ ಚೆಲ್ವತಿರುನಾರಾಯಣಸ್ವಾಮಿಗೆ ಸೌರಮಾನದ ಮೀನಮಾಸದ ಚಿತ್ತಾ ನಕ್ಷತ್ರದ ಶುಭದಿನವಾದ ಭಾನುವಾರ ವೇದ ಮಂತ್ರಗಳೊಂದಿಗೆ ದ್ವಾದಶಾರಾಧನೆಯ ಮೂಲಕ ಮಹಾಭಿಷೇಕ ನೆರವೇರುವುದರೊಂದಿಗೆ ಹತ್ತುದಿನಗಳಿಂದ ನಡೆಯುತ್ತಿದ್ದ ವೈರಮುಡಿ ಬ್ರಹ್ಮೋತ್ಸವ ಸಂಪನ್ನವಾಯಿತು.
ಮುಂಜಾನೆಯೇ ಇಡೀ ದೇವಾಲಯವನ್ನು ಸ್ವಚ್ಛಗೊಳಿಸಿ ಬ್ರಹ್ಮೋತ್ಸವದಲ್ಲಿ ಯಾವುದೇ ಲೋಪದೋಷ ನಡೆದಿದ್ದರೂ ಕ್ಷಮಿಸುವಂ ೆಕೋರಿ ಸಂಪ್ರೋಕ್ಷಣೆ ಮಾಡಿದ ನಂತರ ಚಿನ್ನದಧ್ವಜ ಸ್ಥಂಭದ ಬಳಿ ವಿಶೇಷ ಪರಿಹಾರಹೋಮ ನೆರವೇರಿಸಲಾಯಿತು.
ಮೂಲಮೂರ್ತಿ, ಉತ್ಸವಮೂರ್ತಿ ಅಳ್ವಾರ್‌ಗಳು ರಾಮಾನುಜಾಚಾರ್ಯರಿಗೆ ಹಾಲು, ಜೇನು, ಮೊಸರು ಎಳನೀರು ಅರಿಶಿಣ, ಮಂಗಳ ದ್ರವ್ಯಗಳು ಸೇರಿದ ಪವಿತ್ರತೀರ್ಥಗಳಿಂದ ಮಹಾಭಿಷೇಕ ನೆರವೇರಿಸಲಾಯಿತು. ಭಾನುವಾರವಾದ್ದರಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಿದ ಕಾರಣ ಮಹಾಭಿಷೇಕ ಮಧ್ಯೆೆ ಹಾಲು ಮತ್ತು ಪವಿತ್ರ ತೀರ್ಥದ ಅಭಿಷೇಕ ವೇಳೆ ಹಾಗೂ ಅರಿಶಿಣ ಅಲಂಕಾರದ ವೇಳೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಲಾಯಿತು.
ಒಂದು ಸಂವತ್ಸರದಲ್ಲಿ ಎರಡು ಸಲ ಮಾತ್ರ ಮೂಲಮೂರ್ತಿಗೆ ಅಭಿಷೇಕ ನಡೆಯುವ ಸಂಪ್ರದಾಯವಿದ್ದು, ವಿಶ್ವಾವಸು ಸಂವತ್ಸರದ ಮೊದಲ ಮಹಾಭಿಷೇಕ ವೈರಮುಡಿ ಬ್ರಹ್ಮೋತ್ಸವದಲ್ಲಿ ಕೊನೆಯದಿನ ಅದ್ದೂರಿಯಾಗಿ ನಡೆಯಿತು. ಇದೇ ಸಂವತ್ಸರದ ಆಷಾಢಮಾಸದಲ್ಲಿ ಮುಮ್ಮುಡಿ ಶ್ರೀಕೃಷ್ಣರಾಜಒಡೆಯರ್ ಜಯಂತ್ಯುತ್ಸವದಂದು ಎರಡನೇ ಭಾರಿ ಮಹಾಭಿಷೇಕ ನಡೆಯುತ್ತದೆ.
ಗರ್ಭಗೃಹ ಪ್ರದಕ್ಷಿಣೆ ಅವಕಾಶ: ಮೇಲುಕೋಟೆ ಸಾಕ್ಷಾತ್ ಶ್ರೀಮನ್ನಾರಾಯಣನೇ ನೆಲೆಸಿ ಸದಾಕಾಲ ದಿವ್ಯದರ್ಶನ ನೀಡುವ ಕಾರಣ ಭೂವೈಕುಂಠವಾಗಿದ್ದು, ಇಲ್ಲಿ ವೈಕುಂಠದ್ವಾರ ತೆರೆಯುವ ಸಂಪ್ರದಾಯ ಇಲ್ಲ. ಬದಲಾಗಿ ವರ್ಷಕ್ಕೊಮ್ಮೆ ಚೆಲ್ವತಿರುನಾರಾಯಣಸ್ವಾಮಿಯ ಮೂಲಗರ್ಭಗುಡಿಯ ಪ್ರದಕ್ಷಿಣೆಗೆ ಮಹಾಭಿಷೇಕದ ರಾತ್ರಿ ಅವಕಾಶ ನೀಡಲಾಗುತ್ತಿದ್ದು, ಭಾನುವಾರ ರಾತ್ರಿ ಭಕ್ತರಿಗೆ ಪ್ರದಕ್ಷಿಣೆಗೆ ಮುಕ್ತ ಅವಕಾಶ ನೀಡಲಾಗಿತ್ತು. ಹನುಮಂತವಾಹನೋತ್ಸವ ಉತ್ಸವ ಬೀದಿಗಳಲ್ಲಿ ಮೆರವಣಿಗೆ ಬರುವ ಸಮಯಾವಕಾಶದಲ್ಲಿ ಮಾತ್ರ ಪ್ರದಕ್ಷಿಣೆಗೆ ಅವಕಾಶವಿದ್ದ ಕಾರಣ ಅರ್ಧಗಂಟೆಯಲ್ಲಿ ನೂರಾರು ಭಕ್ತರು ಗರ್ಭಗೃಹ ಪ್ರದಕ್ಷಿಣೆ ಹಾಕಿ ಧನ್ಯರಾದರು.