

ಹುಬ್ಬಳ್ಳಿ: ನ್ಯಾ. ಸದಾಶಿವ ಆಯೋಗ ವರದಿ ಜಾರಿ ನಮ್ಮ ಆದ್ಯ ಕರ್ತವ್ಯ. ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು ಹಾಗೂ ಕಾನೂನು ತಜ್ಞರ ನೇತೃತ್ವದಲ್ಲಿ ರ್ಚಚಿಸಲಾಗುವುದು. ಯಾವುದೇ ರೀತಿಯ ಕಾನೂನು ತೊಡಕು ಆಗದಂತೆ ಜಾರಿ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಚುನಾವಣೆ ವೇಳೆ ಮಾತುಕೊಟ್ಟಿದ್ದೇವು. ಚಿತ್ರದುರ್ಗದ ಸಮಾವೇಶದಲ್ಲಿ ಯಥಾವತ್ತಾಗಿ ಜಾರಿ ಮಾಡುವುದಾಗಿ ಹೇಳಿದ್ದೆವು. ಅಧಿವೇಶನದಲ್ಲಿ ಮಂಡನೆ ಮಾಡುವುದಾಗಿಯೂ ತಿಳಿಸಿದ್ದೆವು ಎಂದರು.
ಬಿಜೆಪಿಯವರು ಕಾಟಾಚಾರಕ್ಕೆ ಮೀಸಲಾತಿ ಜಾರಿ ಮಾಡಿದ್ದಾರೆ. ಸದಾಶಿವ ಆಯೋಗದ ವರದಿ ತಿರಸ್ಕರಿಸಿದ್ದಾರೆ. ಎಲ್ಲ ವರ್ಗದವರಿಗೆ ಮೀಸಲಾತಿ ಕೊಡಲಾಗುವುದು ಎಂದು ಹೇಳಿ ಚಾಕೋಲೆಟ್ ಹಂಚಿಕೆ ಮಾಡಿದ ಹಾಗೆ ಬಿಜೆಪಿಯವರು ಮಾಡಿದ್ದಾರೆ. ಸಂವಿಧಾನ ವ್ಯಾಪ್ತಿಯಲ್ಲಿ ರ್ಚಚಿಸಿ, ಸದಾಶಿವ ಆಯೋಗ ವರದಿ ಜಾರಿ ವಿಷಯದಲ್ಲಿ ಕಾಂಗ್ರೆಸ್ ಓಪನ್ ಮೈಂಡ್ ಹೊಂದಿದೆ ಎಂದು ಹೇಳಿದರು.
ಜೆಡಿಎಸ್ ಶಾಸಕರು ಆಪರೇಷನ್ ಹಸ್ತ ಭೀತಿಯಿಂದ ರೆಸಾರ್ಟ್ನಲ್ಲಿ ಸಭೆ ಮಾಡುವುದು ಹೊಸದೇನಲ್ಲ. ಮಾಡಲಿ ಬಿಡಿ ಎಂದರು. ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಅಧಿಕಾರ ಹಂಚಿಕೆ ವಿಚಾರವಾಗಿ ಮಾತನಾಡಿದ ಮಹದೇವಪ್ಪ, ಈ ಕುರಿತು ಏನೂ ಮಾತಾಡಲಿಕ್ಕೆ ಆಗುವುದಿಲ್ಲ. ಇದಕ್ಕೆ ಹೈಕಮಾಂಡ್ ಮಾತ್ರ ಉತ್ತರ ಕೊಡುತ್ತದೆ ಎಂದರು.