ಎಂಆರ್‌ಪಿಎಲ್ ತಲುಪಿದ ಒನ್‌ಜಿಸಿ ಮೊದಲ ಕಚ್ಚಾ ತೈಲ

mng--9 March MRPL
Published on

ಮಂಗಳೂರು: ಬಂಗಾಲಕೊಲ್ಲಿಯ ಕೃಷ್ಣ-ಗೋದಾವರಿ ಜಲಾನಯನ ಪ್ರದೇಶದಿಂದ ಒಎನ್‌ಜಿಸಿ (ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್) ಹೊರ ತೆಗೆದ ಕಚ್ಚಾ ತೈಲ ತುಂಬಿದ ಮೊದಲ ಸರಕು ಹಡಗು ಮಂಗಳೂರಿಗೆ ಆಗಮಿಸಿದ್ದು, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಶನಿವಾರ ಕಚ್ಚಾತೈಲವನ್ನು ಸ್ವೀಕರಿಸಿತು.


ಕೆಜಿ 98/2 ಹೆಸರಿನ ಕಚ್ಚಾತೈಲ ಇದಾಗಿದ್ದು, ಇದರ ಪ್ರಥಮ ಸಾಗಾಟದ ಸರಕು ಹಡಗು ಸ್ವರ್ಣ ಸಿಂಧುಗೆ ಮಾ.2ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದರು. 60 ಸಾವಿರ ಮೆಟ್ರಿಕ್ ಟನ್ ಕಚ್ಚಾತೈಲ ಹೊತ್ತ ಆ ಹಡಗು ಇದೀಗ ಮಂಗಳೂರು ತಲುಪಿದೆ. ಎಂಆರ್‌ಪಿಎಲ್‌ನಲ್ಲಿ ಈ ಕಚ್ಚಾತೈಲ ಸಂಸ್ಕರಣೆಯಾಗಿ ಪೆಟ್ರೋಲಿಯಂ ಉತ್ಪನ್ನಗಳು ತಯಾರಾಗಲಿವೆ ಎಂದು ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಬಳಿಕ ನಡೆದ ಕಾರ್ಯಕ್ರಮದಲ್ಲಿ ಒನ್‌ಜಿಸಿಯ ಜಿಜಿಎಂ (ಪ್ರೋಜೆಕ್ಟ್) ಸುನಿಲ್ ಕುಮಾರ್ ಅವರು ಎಂಆರ್‌ಪಿಎಲ್ ಡೈರೆಕ್ಟರ್ (ಫೈನಾನ್ಸ್) ವಿವೇಕ್ ತಂಗೋನ್ಕರ್, ಸಿವಿಒ ಗಣೇಶ್ ಭಟ್ ಅವರಿಗೆ ಸಾಂಕೇತಿಕವಾಗಿ ಕಚ್ಚಾ ತೈಲ ಹಸ್ತಾಂತರಿಸಿದರು. ಕೋಸ್ಟ್‌ಗಾರ್ಡ್ ಡಿಜಿ ಪಿ.ಕೆ.ಮಿಶ್ರಾ ಉಪಸ್ಥಿತರಿದ್ದರು.


ಗುಣಮಟ್ಟದ ಉತ್ಪನ್ನ
ಸ್ವೀಕರಿಸಿದ ಕಚ್ಚಾ ತೈಲವನ್ನು ಎಂಆರ್‌ಪಿಎಲ್‌ನಲ್ಲಿ ಶೀಘ್ರದಲ್ಲೇ ಸಂಸ್ಕರಿಸಲಾಗುತ್ತದೆ. ಇದಕ್ಕೆ ಬೇಕಾದ ಎಲ್ಲ ಬಗೆಯ ತಾಂತ್ರಿಕ ಸಾಮರ್ಥ್ಯ ಎಂಆರ್‌ಪಿಎಲ್‌ನಲ್ಲಿದೆ. ಈಗಾಗಲೇ ನೂರಕ್ಕೂ ಅಧಿಕ ಬಗೆಯ ಕಚ್ಚಾತೈಲಗಳನ್ನು ಎಂಆರ್‌ಪಿಎಲ್ ಸಂಸ್ಕರಣೆ ಮಾಡಿದೆ. ಸಾಮಾನ್ಯವಾಗಿ ದೇಶೀಯ ಕಚ್ಚಾತೈಲವು ಮಧ್ಯಮ ಸ್ನಿಗ್ಧತೆ ಮತ್ತು ಕಡಿಮೆ ಸಲ್ಫರ್ ಅಂಶಗಳನ್ನು ಹೊಂದಿರುತ್ತದೆ. ಸಂಸ್ಕರಣೆ ವೇಳೆ ಈ ಕಚ್ಚಾತೈಲದ ಗುಣಲಕ್ಷಣಗಳನ್ನು ಮೌಲ್ಯಮಾಪನ ಮಾಡಿ ಅದಕ್ಕೆ ಪೂರಕವಾಗಿ ಸಂಸ್ಕರಣೆ ಪ್ರಕ್ರಿಯೆ ನಡೆಸಲಿದ್ದೇವೆ.


ಕಚ್ಚಾತೈಲವು ಸಲ್ಫರ್ ಹಾಗೂ ವಿವಿಧ ಲೋಹಾಂಶಗಳನ್ನು ಅಧಿಕವಾಗಿ ಹೊಂದಿರುತ್ತದೆ. ಸಂಸ್ಕರಣಾಗಾರದಲ್ಲಿ ನಾವು ಕಚ್ಚಾ ತೈಲದಿಂದ ಈ ಎಲ್ಲ ಕಲ್ಮಶಗಳನ್ನು ತೆಗೆದು ಹಾನಿಕಾರಕವಲ್ಲದ ಗುಣಮಟ್ಟದ ಪೆಟ್ರೋಲಿಯಂ ಉತ್ಪನ್ನಗಳನ್ನು ನೀಡುತ್ತೇವೆ ಎಂದು ಕಾಮತ್ ಹೇಳಿದರು.


ಆತ್ಮನಿರ್ಭರತೆಯತ್ತ ಹೆಜ್ಜೆ:
ಎಂಆರ್‌ಪಿಎಲ್ ನಿರ್ದೇಶಕ (ಸಂಸ್ಕರಣೆ) ಸಂಜಯ್ ವರ್ಮ ಮಾತನಾಡಿ, ಪ್ರಸ್ತುತ ಕಚ್ಚಾತೈಲ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ ಆಗಿಲ್ಲ. ಬಹುತೇಕ ಕಚ್ಚಾತೈಲವನ್ನು ವಿದೇಶಗಳಿಂದ ಆಮದು ಮಾಡಲಾಗುತ್ತಿದೆ. ಒಎನ್‌ಜಿಸಿಯು ಕೃಷ್ಣಾ ಗೋದಾವರಿ ಪ್ರದೇಶದಲ್ಲಿ ಭಾರೀ ಪ್ರಮಾಣದ ತೈಲ ನಿಕ್ಷೇಪ ಪತ್ತೆಹಚ್ಚಿ ಅದರಿಂದ ಹೊರ ತೆಗೆದ ಕಚ್ಚಾ ತೈಲ ಎಂಆರ್‌ಪಿಎಲ್‌ಗೆ ಪ್ರಥಮ ಸಾಗಾಟ ಮಾಡುವುದರೊಂದಿಗೆ ಆತ್ಮನಿರ್ಭರತೆ ಸಾಧಿಸುವತ್ತ ಹೆಜ್ಜೆಯಿಟ್ಟಿದೆ ಎಂದು ತಿಳಿಸಿದರು.

ಶೇ.7ರಷ್ಟು ಸಾಧನೆ
ಪ್ರಸ್ತುತ ಒಎನ್‌ಜಿಸಿಯು ನಿತ್ಯವೂ 12 ಸಾವಿರ ಬ್ಯಾರೆಲ್ ಕಚ್ಚಾತೈಲ ಹೊರತೆಗೆಯುತ್ತಿದೆ. ಪೂರ್ಣಪ್ರಮಾಣದಲ್ಲಿ ಪ್ರಕ್ರಿಯೆ ಶುರುವಾದಾಗ ಅಂದಾಜು 45-50 ಸಾವಿರ ಬ್ಯಾರೆಲ್ ಕಚ್ಚಾತೈಲ ಉತ್ಪಾದನೆ ಮಾಡುವ ನಿರೀಕ್ಷೆಯಿದ್ದು, ದೇಶದ ಕಚ್ಚಾತೈಲದಲ್ಲಿ ಶೇ.7ರಷ್ಟು ಸಾಧನೆ ಮಾಡಲಿದೆ. ಈ ಮೂಲಕ ಸಾವಿರಾರು ಕೋಟಿ ರು. ವಿದೇಶಿ ವಿನಿಮಯ ಉಳಿತಾಯವಾಗಲಿದೆ ಎಂದರು.
ಎಂಆರ್‌ಪಿಎಲ್ ಜಿಜಿಎಂ (ಎಚ್‌ಆರ್) ಕೃಷ್ಣ ಹೆಗ್ಡೆ ಸ್ವಾಗತಿಸಿದರು. ಸಿಜಿಎಂ (ಎಚ್‌ಆರ್) ಸಂದೇಶ್ ಕುಟಿನ್ಹೋ ವಂದಿಸಿದರು. ಜಿಎಂ (ಕಾರ್ಪೋರೆಟ್ ಕಮ್ಯುನಿಕೇಶನ್) ಡಾ.ರುಡಾಲ್ಫ್ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net