ದ್ವೇಷಕ್ಕೆ ಸುಡುತ್ತಿವೆ ರಾಗಿ ಮೆದೆ, ರೈತರಿಗೆ ತಲೆನೋವಾದ ರಕ್ಷಣೆ, ಕಿಡಿಗೇಡಿಗಳ ಕೃತ್ಯ ನಿರಾತಂಕ

27 rural 01
Published on

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ 41 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬೆಳೆದ ರೈತರು ರಾಸುಗಳ ಮೇವಿನಲ್ಲೂ ಸಮೃದ್ಧಿ ಕಂಡಿದ್ದಾರೆ. ಆದರೆ ರಾಗಿ ಬಣವೆಗಳನ್ನು ಕಿಡಿಗೇಡಿಗಳಿಂದ ರಕ್ಷಿಸುವುದೇ ದೊಡ್ಡ ತಲೆನೋವಾಗಗಿದೆ. ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳು ಹಳ್ಳಹಿಡಿಯುತ್ತಿವೆ. ಆರೋಪಗಳು ಸಾಬೀತಾಗುತ್ತಿಲ್ಲ. ತನಿಖೆಗೆ ಪೊಲೀಸರು ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ಕಿಡಿಗೇಡಿಗಳ ಕೃತ್ಯ ನಿರಾತಂಕವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಸತತ ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಸಲು ಬಂದಿದೆ. ಕಟಾವು ಮುಗಿದು ಒಕ್ಕಣೆಯೂ ಅಂತಿಮ ಹಂತಕ್ಕೆ ತಲುಪಿದೆ. ಆದರೆ ಕಟಾವು ಮಾಡಿದ ರಾಗಿ ಮೆದೆಗಳಿಗೆ ವೈಯಕ್ತಿಕ ದ್ವೇಷ, ಹೊಟ್ಟೆಕಿಚ್ಚು ಮತ್ತಿತರ ಕಾರಣಗಳಿಂದ ಕಿಡಿಗೇಡಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆಯುತ್ತಿದ್ದಾರೆ. ರಾಸುಗಳಿಗೆ ಸಮೃದ್ಧ್ಧ ಮೇವಿನ ಕನಸುಕಂಡ ರೈತರು ಕಣ್ಣೀರು ಹಾಕುವಂತಾಗಿದೆ.

ಪ್ರತಿವರ್ಷ ನೂರಾರು ಪ್ರಕರಣಗಳು ಠಾಣೆ ಮೆಟ್ಟಿಲೇರುತ್ತಿವೆ. ಆದರೆ ತಪ್ಪಿತಸ್ಥರು ಸಿಗುತ್ತಿಲ್ಲ, ಸಿಕ್ಕರೂ ಶಿಕ್ಷೆಯಾಗುತ್ತಿಲ್ಲ ಕೆಲವೊಂದು ರಾಜೀಯಲ್ಲೇ ಕೊನೆಗೊಳ್ಳುತ್ತಿವೆ. ಅವು ಮುಂದಿನ ವರ್ಷದ ದ್ವೇಷಕ್ಕೆ ಮುಂದೂಡಲ್ಪಡುತ್ತಿವೆ.

ಪರಿಹಾರಕ್ಕೂ ಅಲೆದಾಟ: ರಾಗಿ ಬಣವೆಗಳು ಕ್ಷಣಾರ್ಧದಲ್ಲೇ ಬೂದಿಯಾಗುತ್ತವೆ. ರೈತರಿಗೆ ಜಿಲ್ಲಾಡಳಿತ ನೀಡುವ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಜತೆಗೆ ಬೆಂಕಿ ಪ್ರಕರಣ ಕುರಿತಂತೆ ಠಾಣೆಯಲ್ಲಿ ದೂರು ದಾಖಲಾಗಬೇಕು. ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸಬೇಕು. ಠಾಣೆಯಿಂದ ಎ್ಐಆರ್ ಪ್ರತಿಯೊಂದಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಎಸಿ ಕಮಿಟಿಗೆ ಅರ್ಜಿ ಸಲ್ಲಿಸಬೇಕು. ಕಮಿಟಿಯಿಂದ ಪ್ರಕರಣ ಕುರಿತಂತೆ ಸ್ಥಳ ಮಹಜರು ಸೇರಿ ಮತ್ತಿತರ ನಿಯಮ ಪಾಲಿಸಬೇಕು. ಇದೆಲ್ಲವೂ ಸರಿಹೊಂದಿ ರೈತರು ಪರಿಹಾರ ಪಡೆಯುವುದರೊಳಗೆ ಸಾಕಷ್ಟು ಚಪ್ಪಲಿ ಸವೆಸಬೇಕಾದ ಪರಿಸ್ಥಿತಿ ಇದೆ.

ಉದ್ದೇಶಪೂರ್ವಕವಾಗಿ ಆಸ್ತಿ ನಾಶಮಾಡಿದ ಅಪರಾಧದಡಿ ಪ್ರಕರಣ ದಾಖಲಾಗುತ್ತದೆ. ತನಿಖೆ ನಡೆಸಿ ಆರೋಪಿಗಳ ಬಂಧನವಾಗುತ್ತದೆ. ಇಂಥ ಕಿಡಿಗೇಡಿ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ರೈತರ ನೆರವಿಗೆ ನಿಲ್ಲಲು ಪೊಲೀಸ್ ಇಲಾಖೆ ಸದಾ ಸಿದ್ದವಿದೆ. ರವಿ ಡಿ.ಚನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಗಿ ಬಣವೆಗಳಿಗೆ ಬೆಂಕಿ ಬಿದ್ದು ಪರಿಹಾರ ಕೋರಿ ಬರುವ ಅರ್ಜಿಗಳನ್ನು ಎಸಿ ಕಮಿಟಿ ಮೂಲಕ ಶೀಘ್ರ ಪರಿಹಾರ ಬಿಡುಗಡೆಗೆ ಶ್ರಮಿಸಲಾಗುತ್ತಿದೆ. ಇಂಥ ಪ್ರಕರಣ ಸಂಬಂಧ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಸಂಪರ್ಕಿಸಬಹುದು. ಜಯಸ್ವಾಮಿ, ಜಂಟಿ ಕೃಷಿ ನಿರ್ದೇಶಕ, ಬೆಂ. ಗ್ರಾ ಜಿಲ್ಲೆ

ತೂಬಗುಂಟೆ ಗ್ರಾಮದಲ್ಲಿ ಬೆಂಕಿ: ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿಯ ತೂಬಕುಂಟೆಯಲ್ಲಿ ಚಂದ್ರಯ್ಯ ಎಂಬುವವರ ರಾಗಿಬಣವೆಗೆ ಬುಧವಾರ ಬೆಳಗಿನ ಜಾವ ಬೆಂಕಿ ಬಿದ್ದಿದೆ. ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದೆ. ಕುಟುಂಬ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ಎಸಲಾಗಿದೆ ಎಂದು ಮಾಲೀಕರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net