

ಚನ್ನಗಿರಿ: ಎರಡನೇ ದೊಡ್ಡ ತಾಲೂಕು ಚನ್ನಗಿರಿ. 182 ಗ್ರಾಮ, 61 ಗ್ರಾಮ ಪಂಚಾಯಿತಿ ಹೊಂದಿದೆ. ಆದರೆ ಇಲ್ಲಿನ ಕರ್ನಾಟಕ ಅಗ್ನಿಶಾಮಕ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ತುರ್ತುಸೇವೆಗಾಗಿ ನೀಡಿರುವ ಎರಡು ವಾಹನಗಳ ಅವಧಿ ಮುಗಿಯುತ್ತಾ ಬಂದಿದ್ದು, ಸಾರ್ವಜನಿಕ ಆಸ್ತಿ, ಪಾಸ್ತಿಗಳಿಗೆ ಹಾನಿಯಾದರೆ ತಕ್ಷಣವೇ ಸೇವೆ ಸಿಗುವುದು ಕಷ್ಟಸಾಧ್ಯವಾಗಲಿದೆ.
ಪ್ರಕೃತಿ ವಿಕೋಪದಿಂದ ಆಗುವಂತಹ ಅನಾಹುತ ತಪ್ಪಿಸುವ ಸಲುವಾಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ 2005ರಲ್ಲಿ ಅಗ್ನಿಶಾಮಕ ಮತ್ತು ತುರ್ತುಸೇವೆ ಕಚೇರಿ ಉದ್ಘಾಟನೆಗೊಂಡಿತು. 2009 ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು 28 ಸಿಬ್ಬಂದಿಯೊಂದಿಗೆ ಸೇವೆ ಆರಂಭಿಸಿತು.
ಪ್ರತಿ ವರ್ಷ ತಾಲೂಕಿನಲ್ಲಿ ಅತಿವೃಷ್ಟಿ, ಅಡಕೆ ತೋಟದ ರಸ್ತೆಬದಿಯಲ್ಲಿ ಹಾಕಿದ ಅಡಕೆ ಸಿಪ್ಪೆಗಳಿಗೆ ಬೆಂಕಿ ಬೀಳುತ್ತದೆ ಒಂದು ವರ್ಷದಲ್ಲಿ 150ಕ್ಕೂ ಇಂತಹ ಹೆಚ್ಚಿನ ಘಟನೆಗಳು ನಡೆಯುತ್ತವೆ. 2013ರಲ್ಲಿ ಜನವರಿಯಿಂದ ಆಗಸ್ಟ್‌ವರೆಗೆ 149 ಪ್ರಕರಣ ನಡೆದಿವೆ. ಆದರೆ ಅಗ್ನಿಶಾಮಕ ಕಚೇರಿಗೆ ನೀಡಿರುವ ವಾಹನಗಳ ಪೈಕಿ ಒಂದನ್ನು 2009ರಲ್ಲಿ ಖರೀದಿಸಿದ್ದರೆ, ಇನ್ನೊಂದು 2012ರಲ್ಲಿ ಖರೀದಿಸಲಾಗಿದೆ. ಹೀಗಾಗಿ ಅವುಗಳ ಅವಧಿ ಮುಗಿದಿದ್ದು, ಮೇಲಿಂದ ಮೇಲೆ ವಾಹನಗಳ ರಿಪೇರಿ ಮಾಡಬೇಕಾದ ದುಸ್ಥಿತಿ ಇದೆ.
ಒಟ್ಟು 28 ಸಿಬ್ಬಂದಿಗಳಲ್ಲಿ 18 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2 ಪ್ರಮುಖ ಅಗ್ನಿ ಶಾಮಕರು, 1 ಚಾಲಕ ಹಾಗೂ 5 ಅಗ್ನಿ ಶಾಮಕರ ಹುದ್ದೆಗಳು ಖಾಲಿ ಇವೆ. ಕಚೇರಿ ಪ್ರಾರಂಭದ ದಿನದಲ್ಲಿ ನೀಡಿದಂತಹ ಉಪಕರಣಗಳು ಹಳೆಯದಾಗಿವೆ. ಇರುವಂತಹ ಸಿಬ್ಬಂದಿ ಉಪಯೋಗಿಸಿಕೊಂಡು ಹಗಲು ಮತ್ತು ರಾತ್ರಿ ಪಾಳಿಯನ್ನು ಹಾಕಲಾಗುತ್ತಿದೆ. ರಾತ್ರಿಇಡೀ ಕೆಲಸ ಮಾಡಿ ಬೆಳಗ್ಗೆ ಅನಾಹುತ ಸಂಭವಿಸಿದ ಸಮಯದಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ.
ಇರುವ ಎರಡು ವಾಹನಗಳ ದುರಸ್ತಿ ಮಾಡಿಸಿ ಕಂಡಿಷನ್ ಮಾಡಿಸಲಾಗಿದೆ. 15 ವರ್ಷ ತುಂಬಿದ ವಾಹನಗಳನ್ನು ಸ್ಕ್ರಾೃಪ್ ಮಾಡಲಾಗುತ್ತದೆ. ಅದರೆ ಇರುವಂತ ವಾಹನಗಳು ಉತ್ತಮವಾಗಿ ಇರುವ ಕಾರಣ ಮೇಲಧಿಕಾರಿಗಳಿಗೆ ಅವಧಿ ವಿಸ್ತರಿಸಿಕೊಡುವಂತೆ ಪತ್ರ ಬರೆಯಲಾಗಿದೆ. ಈ ಬಾರಿ ಹೊಸ ಹುದ್ದೆಗಳ ಆಯ್ಕೆ ನಡೆದು ಸಿಬ್ಬಂದಿ ನೇಮಕವಾಗಲಿದ್ದಾರೆ.
ಬಿ.ಆರ್.ಅಶೋಕ್‌ಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ