

ಬಹುತೇಕ ಕಲಾವಿದರ ಆರ್ಥಿಕ ಸ್ಥಿತಿ ಇಂದಿಗೂ ಶೋಚನೀಯವಾಗಿದೆ. ಕಲೆಯೇ ಜೀವಾಳವಾಗಿ ಕಲಾ ಶಾರದೆಯ ಸೇವೆ ಎಂದು ಬದುಕುತ್ತಿರುವ ಕಲಾವಿದರ ಗೋಳು ಕೇಳುವವರು ಯಾರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಂಗಭೂಮಿ ಕಲಾವಿದ ಹುಯಿಲಾಳು ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದ ಪುರಭವನದಲ್ಲಿ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಣಪತಿ ಮಿತ್ರ ಮಂಡಳಿ ವತಿಯಿಂದ ಆಯೋಜಿಸಿದ್ದ ರಂಗ ಪಿತಾಮಹರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರಲ್ಲಿ ಅಡಕವಾಗಿರುವ ಜಾನಪದ ಕಲೆಗಳಿಂದ ನಮ್ಮ ನಾಡು ಶ್ರೀಮಂತವಾಗಿದೆ. ಆದರೆ, ಕಲೆಯೇ ನಮ್ಮ ಸಂಸ್ಕೃತಿ, ಜೀವಾಳವೆಂದು ಬದುಕುತ್ತಿರುವ ಎಷ್ಟೋ ಕುಟುಂಬಗಳು ಬದುಕು ಕಟ್ಟಿಕೊಳ್ಳಲಾಗದೆ ನಿರಾಶ್ರಿತರಾಗಿದ್ದಾರೆ. ಕಲೆ ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ. ಆಗ ಕಲಾವಿದರೂ ಉಳಿಯುವರು ಎಂದರು.
ಕಲಾವಿದರಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದ್ದರೂ ಎಷ್ಟೋ ಬಡ ಹವ್ಯಾಸಿ ಕಲಾವಿದರು ಇಲಾಖೆಯ ಸೌಲಭ್ಯ ವಂಚಿತರಾಗಿದ್ದಾರೆ. ಎಲ್ಲರನ್ನೂ ಪ್ರೋತ್ಸಾಹಿಸಬೇಕಾದ ಇಲಾಖೆ ಪಾರದರ್ಶಕತೆಯಿಂದ ದೂರವಾದಂತೆ ಕಾಣುತ್ತಿದೆ ಎಂದು ದೂರಿದರು.
ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ, ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ವಾಸ್ತುತಜ್ಞ ರಾಮ್ ಶ್ರೀಕಾಂತ್ ತೇಜಾ ಗುರು, ಕೃಷ್ಣಮೂರ್ತಿ, ಮಾಲಿಂಗು, ಗೋಲ್ಡ್ ಸುರೇಶ್, ಸಂಜೀವ್‌ಕುಮಾರ್ ಇತರರಿದ್ದರು.