

ಶಿರಹಟ್ಟಿ: ಪಟ್ಟಣದ ಮಾರ್ಕೆಟ್ ರಸ್ತೆಯ ಮನೆಯೊಂದರಲ್ಲಿ ಮಾತ್ರ ಹೋಳಿ ಹುಣ್ಣಿಮೆ ನಿಮಿತ್ತ ಮಣ್ಣಿನ ರತಿ-ಕಾಮ ಮೂರ್ತಿಗಳ ತಯಾರಿಕೆ ದಶಕಗಳಿಂದ ನಡೆಯುತ್ತಿದೆ. ಮೂರ್ತಿ ತಯಾರಕರು ಒಂದು ತಿಂಗಳಿಂದ ರತಿಕಾಮರ ವಿವಿಧ ಗಾತ್ರದ ಮೂರ್ತಿಗಳನ್ನು ಸಿದ್ಧಗೊಳಿಸುವಲ್ಲಿ ನಿರತರಾಗಿದ್ದು, ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಬೇಡಿಕೆಯ ಪ್ರಕಾರ ಮಣ್ಣಿನ ಕಾಮರತಿ ಮೂರ್ತಿಗಳಿಗೆ ಬಣ್ಣ ಹಚ್ಚುವ ಕಾರ್ಯವೂ ಜೋರಾಗಿ ನಡೆಯುತ್ತಿದೆ.
ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಪಟ್ಟಣ ಹಾಗೂ ತಾಲೂಕು ಪ್ರದೇಶಗಳಲ್ಲಿ ಮಣ್ಣಿನ ಕಾಮರತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಪರಂಪರೆಯಿದೆ. ಹೋಳಿ ಹಬ್ಬ ಇನ್ನೂ ಒಂದು ತಿಂಗಳ ಉಳಿದಿರುವಂತೆ ಮೂರ್ತಿ ತಯಾರಿಕೆ ಕಾರ್ಯ ಚುರುಕು ಪಡೆದುಕೊಳ್ಳುತ್ತದೆ. 1 ಅಡಿಯಿಂದ 4 ಅಡಿ ಎತ್ತರದ ಸಾಂಪ್ರದಾಯಿಕ ಕಾಮರತಿ ಮೂರ್ತಿಗಳಿಗೆ ಹಳದಿ, ಕೆಂಪು, ಹಸಿರು, ನೀಲಿ ಬಣ್ಣಗಳನ್ನು ಬಳಸಿ ಸುಂದರವಾಗಿ ಮಾಡಲಾಗುತ್ತದೆ. ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದಲೂ ಮೂರ್ತಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ಮೂರ್ತಿಗಳ ಬೆಲೆ 500 ರೂ.ಗಳಿಂದ 2500 ರೂ.ಗಳ ವರೆಗೆ ಇರಲಿದೆ. ಈ ವರ್ಷಕ್ಕೆ ಸುಮಾರು 100ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಲಾಗಿದ್ದು, ಅವುಗಳೆಲ್ಲವೂ ಮಾರಾಟವಾಗಲಿವೆ ಎನ್ನುತ್ತಾರೆ ಮೂರ್ತಿ ತಯಾರಕ ನಾಗೇಶ್ ಪುಂಡಲಿಕ ಕಪಟಕರ್.
ಕಿಟ್ಟದ ಕಾಮರತಿ ಮೂರ್ತಿಗಳು: ಮಣ್ಣಿನ ಮೂರ್ತಿಗಳ ಜೊತೆಗೆ ಕೆಲವು ಸ್ಥಳಗಳಲ್ಲಿ ಕಿಟ್ಟದ ಕಾಮಣ್ಣನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಮೂರ್ತಿಗಳನ್ನು ಹುಣಸೆ ಬೀಜದಿಂದ ತಯಾರಿಸಿದ ಶೇರಿಯಿಂದ ಮಾಡಲಾಗಿರುತ್ತದೆ. ಇದರಿಂದಾಗಿ ಅವು 60ರಿಂದ 70 ವರ್ಷಗಳವರೆಗೆ ಬಾಳಿಕೆ ಬರುವ ಸಾಮರ್ಥ್ಯ ಹೊಂದಿರುತ್ತವೆ. ಶಾಸ್ತ್ರದ ಪ್ರಕಾರ ಹೋಳಿ ಹಬ್ಬದಂದು ಕೇವಲ ಕಾಮಣ್ಣನ ಶಾಸ್ತ್ರೀಯ ಮೂರ್ತಿಯನ್ನು ಸುಟ್ಟು, ಕಿಟ್ಟದ ಮೂರ್ತಿಗಳನ್ನು ಸಂರಕ್ಷಿಸಿಡಲಾಗುತ್ತದೆ. ಮುಂದಿನ ವರ್ಷದ ಹೋಳಿ ವೇಳೆಗೆ ಮತ್ತೆ ಕಿಟ್ಟದ ಕಾಮಣ್ಣನನ್ನು ಪ್ರತಿಷ್ಠಾಪಿಸಿ ಮತ್ತೆ ಸಂರಕ್ಷಿಸಿಡಲಾಗುತ್ತದೆ.
ಪಟ್ಟಣದ ವಾಲ್ಮೀಕಿ ಸರ್ಕಲ್ ಬಳಿ ವಿಶೇಷ ನೈಸರ್ಗಿಕ ರತಿಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದ್ದು, ಜನರು ತಮ್ಮ ಬೇಡಿಕೆ ಮತ್ತು ಹರಕೆಗಳನ್ನು ಸಲ್ಲಿಸುವ ಪರಂಪರೆಯಿದೆ.
ಹೋಳಿ ಹುಣ್ಣಿಮೆಯ ಮಾರನೇಯ ದಿನ ಬಣ್ಣದಾಟ ನಡೆಯುವ ಮೂಲಕ ಹಬ್ಬದ ಸಂಭ್ರಮ ಸಮಾಪ್ತಿ ಹೊಂದಲಿದೆ.
ಈ ವರ್ಷ ಮೂರ್ತಿಗಳ ವ್ಯಾಪಾರ ಉತ್ತಮವಾಗಿದ್ದರೂ, ಬಣ್ಣ, ಮಣ್ಣು ಮತ್ತು ಇತರ ಸಾಮಗ್ರಿ ದರ ಹೆಚ್ಚಿರುವ ಕಾರಣ ಮೂರ್ತಿಗಳ ಬೆಲೆಯನ್ನು ತುಸು ಹೆಚ್ಚಿಸಲಾಗಿದೆ. ಹೋಳಿ ಸಂಭ್ರಮದಲ್ಲಿ ಈ ಮೂರ್ತಿಗಳ ಪ್ರತಿಷ್ಠಾಪನೆ ಜನರಲ್ಲಿ ಭಕ್ತಿ ಮತ್ತು ಸಾಮಾಜಿಕ ಒಗ್ಗೂಡಿಸುವಿಕೆ ತರುವ ಮಹತ್ವದ ಸಂಪ್ರದಾಯವಾಗಿದೆ. | ನಾಗೇಶ ಪುಂಡಲಿಕ ಕಪಟಕರ್ ಮೂರ್ತಿ ತಯಾರಕರು, ಶಿರಹಟ್ಟಿ