ನವಗ್ರಹ ಕ್ಷೇತ್ರದಲ್ಲಿ ಮಾ.31ಕ್ಕೆ ದಶಕದ ಅಂತಿಮ ಮಹಾಮಸ್ತಕಾಭಿಷೇಕ

New Varur
Published on

ಹುಬ್ಬಳ್ಳಿ : ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಪ್ರಸಕ್ತ ಸಾಲಿನ ಕೊನೆಯ ಮಹಾಮಸ್ತಕಾಭಿಷೇಕವನ್ನು ಮಾ. 31ರಂದು ಆಯೋಜಿಸಲಾಗಿದೆ.

ಕಳೆದ ಜನವರಿಯಲ್ಲಿ ಹಮ್ಮಿಕೊಂಡಿದ್ದ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಕೆಲವು ಜನರಿಗೆ ತೀರ್ಥಂಕರರಿಗೆ ಅಭಿಷೇಕ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಜನರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ರಾಷ್ಟ್ರಸಂತ, ಯುವಾಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಮಾ. 31ರಂದು ಒಂದು ದಿನದ ಮಹಾಮಸ್ತಕಾಭಿಷೇಕ ಹಮ್ಮಿಕೊಳ್ಳಲಾಗಿದೆ.

ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಇದರ ನಂತರ 2037ಕ್ಕೆ ಮುಂದಿನ ಮಹಾಮಸ್ತಕಾಭಿಷೇಕ ನಡೆಯಲಿದೆ.

31ರಂದು ಮಧ್ಯಾಹ್ನ 1 ಗಂಟೆಗೆ 27 ವಿವಿಧ ಪದಾರ್ಥಗಳಿಂದ ಭಗವಾನ್​ ಪಾರ್ಶ್ವನಾಥ ತೀರ್ಥಂಕರರ ಮೂತಿರ್ಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. 2 ಗಂಟೆಗೆ ಸರ್ಪದೋಷ ಸೇರಿದಂತೆ ವಿವಿಧ ದೋಷಗಳ ನಿವಾರಣೆ ಹಾಗೂ ಅನುಷ್ಠಾನ ಆರಾಧನೆ ಜರುಗಲಿದೆ.

ನವಗ್ರಹ ದೋಷ ನಿವಾರಣೆಗಾಗಿ ಇದೇ ಸಂದರ್ಭದಲ್ಲಿ ವಿಶ್ವಶಾಂತಿ ಮಹಾಯಜ್ಞ, ಭವಿಷ್ಯದಲ್ಲಿ ಮಳೆ&ಬೆಳೆ ಉತ್ತಮವಾಗಿರಲೆಂಬ ಪ್ರಾರ್ಥನೆಯೊಂದಿಗೆ ಜಾಪ್ಯಾ ಅನುಷ್ಠಾನ, 1,008 ದೀಪಗಳಿಂದ ದೀಪಾಚರಣೆ ಹಾಗೂ ಸೋನಾಲಿಯಾ ದೇಸಾಯಿ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅತಿಥಿಯಾಗಿ ಪಾಲ್ಗೊಳ್ಳುವರು. 25 ಮುನಿಗಳು, ವಿವಿಧ ಜೈನ ಕ್ಷೇತ್ರಗಳ ಭಟ್ಟಾರಕರು, ವಿದ್ವಾಂಸರು, ಪಂಡಿತರು ಭಾಗವಹಿಸುವರು. ಕರ್ನಾಟಕದ ವಿವಿಧೆಡೆಯಿಂದ ಹಾಗೂ ಮಹಾರಾಷ್ಟ್ರ, ರಾಜಸ್ಥಾನ, ಮತ್ತಿತರ ಪ್ರದೇಶಗಳಿಂದ ಭಕ್ತರು ಪಾಲ್ಗೊಳ್ಳಲಿದ್ದಾರೆ. ಪೂಜೆಯ ನಂತರ ಮಹಾಪ್ರಸಾದ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net