

ಮೈಸೂರು: ನಾಡಹಬ್ಬ ದಸರೆಯ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಗೊಳಿಸುವ ಗಜಪಡೆ ಹಾಗೂ ಅಶ್ವರೋಹಿ ದಳಕ್ಕೆ ಶುಕ್ರವಾರ ಮೂರನೇ ಹಾಗೂ ಅಂತಿಮ ಹಂತದ ಕುಶಾಲತೋಪು ತಾಲೀಮು ನಡೆಸಲಾಯಿತು.
ವಸ್ತುಪ್ರದರ್ಶನ ಆವರಣದಲ್ಲಿ ನಡೆದ ತಾಲೀಮಿನಲ್ಲಿ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ, ವಿಜಯ, ಜತೆಗೆ ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಗೋಪಿ, ಭೀಮ, ಮಹೇಂದ್ರ, ಶ್ರೀರಾಮ, ಸುಗ್ರೀವ ಹಾಗೂ ಪಾರ್ಥಸಾರಥಿ ಆನೆ, ಅಶ್ವಾರೋಹಿ ದಳದ 34 ಕುದುರೆಗಳು ಭಾಗವಹಿಸಿದ್ದವು. ಮರಿಗೆ ಜನ್ಮ ನೀಡಿರುವ ಲಕ್ಷ್ಮೀಯೊಂದಿಗೆ ಇದ್ದುದ್ದರಿಂದ ತಾಲೀಮಿನಲ್ಲಿ ಚೈತ್ರಾ ಆನೆ ಭಾಗವಹಿಸಲಿಲ್ಲ.
ವಿಜಯದಶಮಿಯಂದು ನಡೆಯುವ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ವೇಳೆ 21 ಸುತ್ತು ಕುಶಾಲತೋಪು ಸಿಡಿಸುವ ಸಂಪ್ರದಾಯವಿದ್ದು, ಈ ವೇಳೆ ಭಾರಿ ಸದ್ದಿಗೆ ಆನೆಗಳು ಹಾಗೂ ಅಶ್ವದಳ ಬೆದರದಂತೆ ಅಭ್ಯಾಸ ಮಾಡಿಸುವ ಸಲುವಾಗಿ ಫಿರಂಗಿ ತಾಲೀಮು ನಡೆಸಲಾಗುತ್ತದೆ.
ಗಜಪಡೆ ಹಾಗೂ ಅಶ್ವಾರೋಹಿ ದಳದ ಸಮ್ಮುಖದಲ್ಲಿ ಫಿರಂಗಿ ದಳದ ಸಿಎಆರ್ ಪೊಲೀಸರು 7 ಫಿರಂಗಿಗಳ ಮೂಲಕ ಮೂರು ಸುತ್ತಿನಲ್ಲಿ ಒಟ್ಟು 21 ಸಿಡಿಮದ್ದನ್ನು ಸಿಡಿಸಿ ತಾಲೀಮು ನಡೆಸಿದರು.
ಶಬ್ದಕ್ಕೆ ಒಗ್ಗಿಕೊಂಡ ಆನೆಗಳು: ಮೊದಲ ಹಾಗೂ 2ನೇ ತಾಲೀಮಿನಲ್ಲಿ ಬೆದರಿದ್ದ ಪಾರ್ಥಸಾರಥಿ, ಸುಗ್ರೀವ, ಶ್ರೀರಾಮ ಆನೆಗಳು 3ನೇ ತಾಲೀಮಿನಲ್ಲಿ ಬೆದರದೆ ಭಾರಿ ಶಬ್ದಕ್ಕೆ ಒಗ್ಗಿಕೊಂಡವು. ಎಂದಿನಂತೆ ಈ ಬಾರಿಯೂ ಧನಂಜಯ ಸಿಡಿಮದ್ದು ಸಿಡಿಸುತ್ತಿದ್ದಂತೆ ಬೆದರಿದ. ಹೊಸ ಆನೆ ಪಾರ್ಥಸಾರಥಿ ಒಂದಿಷ್ಟೂ ಬೆದರದೆ ಧೈರ್ಯ ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದ. ಅಂಬಾರಿ ಆನೆ ಅಭಿಮನ್ಯು, ಅರ್ಜುನ ಸೇರಿದಂತೆ ಎಲ್ಲ ಆನೆಗಳು ಧೈರ್ಯವಾಗಿ ನಿಂತಿದ್ದವು. ಒಟ್ಟಾರೆ 2022ರ ದಸರಾ ಉತ್ಸವದಲ್ಲಿನ ಗಜಪಡೆ, ಅಶ್ವದಳಕ್ಕೆ ಅಂತಿಮ ಹಂತದ ಸಿಡಿಮದ್ದು ತಾಲೀಮು ಯಶಸ್ವಿಯಾಗಿ ನಡೆಯಿತು.
ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಸಿಎಫ್ ಮಾಲತಿಪ್ರಿಯಾ, ಡಿಸಿಎಫ್ ಡಾ.ವಿ.ಕರಿಕಾಳನ್, ಡಿಸಿಪಿ ಗೀತಾ ಪ್ರಸನ್ನ, ಆನೆ ವೈದ್ಯ ಡಾ.ಮುಜೀಬ್ ಸೇರಿದಂತೆ ಹಲವರು ಇದ್ದರು.