

ವಿಜಯವಾಣಿ ಸುದ್ದಿಜಾಲ ಧಾರವಾಡ
ನಾವು ಪರಿಸರ ಉಳಿಸುವ ಹೋರಾಟ ಮಾಡುತ್ತಲೇ ಇರೋಣ. ನಮ್ಮ ಹೋರಾಟದಿಂದ ಪರಿಸರ ಉಳಿಯಲಿ, ಪರಿಸರವನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡು ಕೆಲಸ ಮಾಡೋಣ ಎಂದು ಸಮಾವೇಶದ ಸಂಚಾಲಕ ಡಾ. ಸಂಜೀವ ಕುಲಕರ್ಣಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪಶ್ಚಿಮ ಘಟ್ಟ ಉಳಿಸಿ ಅಭಿಯಾನ, ಶಿವಮೊಗ್ಗ, ಪರಿಸರಕ್ಕಾಗಿ ನಾವು ಧಾರವಾಡ ಜಿಲ್ಲೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸಹ್ಯಾದ್ರಿ-2024 ಚಿಂತನ-ಮಂಥನ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಪರಿಸರವನ್ನು ನೋಡಿದಾಗ ಆಗುವ ಸಂತೋಷ ಆಗಾಧವಾದದ್ದು. ಆ ಆನಂದ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಈ ಎರಡು ದಿನದ ಸಮಾವೇಶ ನನಗೆ ಒಂದು ಯೋಚನೆ ಹುಟ್ಟುವಂತೆ ಮಾಡಿದೆ. ಇಂತಹ ಅತ್ಯುತ್ತಮ ಕಾರ್ಯಕ್ರಮಗಳು ಶಾಲಾ ಮಟ್ಟದಲ್ಲಿ ಆಗಬೇಕು ಎಂದರು.
ಸಮಾರೋಪದ ಪೂರ್ವದಲ್ಲಿ ಜರುಗಿದ ಗೋಷ್ಠಿಗಳಲ್ಲಿ ಹವಾಮಾನ ಸಂಕಷ್ಟದ ಹಿನ್ನೆಲೆಯಲ್ಲಿ ಬದಲಾಗುತ್ತಿರುವ ಮಲೆನಾಡು ಕುರಿತು ಬಾಲಚಂದ್ರ ಹೆಗಡೆ, ಸಮತೋಲಿತ ಅಭಿವದ್ಧಿ ಕುರಿತು ಡಾ. ಪ್ರಕಾಶ ಭಟ್ ಮಾತನಾಡಿದರು.
ಬಸವಪ್ರಭು ಹೊಸಕೇರಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಡಾ. ಶಿವಾನಂದ ಶೆಟ್ಟರ, ಶಾರದಾ ಗೋಪಾಲ, ಕವಿತಾ ಎಲೆದಳ್ಳಿ, ಸರಸ್ವತಿ ಪೂಜಾರ, ಬಿ.ಎಂ. ಕುಮಾರಸ್ವಾಮಿ, ಬಾಲಚಂದ್ರ ಹೆಗಡೆ, ಮನೋಜ ಕುಮಾರ, ಅಖಿಲೇಶ ಚಿಪ್ಪಳಿ, ಮಮತಾ ರಾಣಿ ಇತರರು ಇದ್ದರು.
ಸರಸ್ವತಿ ಪೂಜಾರ ಸ್ವಾಗತಿಸಿದರು. ಶಂಕರ ಕುಂಬಿ ವಂದಿಸಿದರು.
ಸಮಾವೇಶ ನಿರ್ಣಯಗಳು: *ಗಾಡ್ಗೀಳ್ ವರದಿ ಕನ್ನಡದಲ್ಲಿ ಅನುವಾದವಾಗಿ ಸಾರ್ವಜನಿಕವಾಗಿ ಬಿಡುಗಡೆಗೊಂಡು ಪ್ರತಿ ಗ್ರಾಮ ಪಂಚಾಯತಿಯನ್ನೂ ತಲುಪಲಿ. ಸಾರ್ವಜನಿಕವಾಗಿ ಚರ್ಚೆಯಾಗಬೇಕು. *ಪ್ರತಿ ಗ್ರಾಮ ಪಂಚಾಯತಿಯಲ್ಲೂ ಮತ್ತೊಮ್ಮೆ ಜೀವ ವೈವಿಧ್ಯ ದಾಖಲಾತಿ ಆಗಬೇಕು.*ಪಶ್ಚಿಮ ಘಟ್ಟಗಳಲ್ಲಿ ಮತ್ತು ಎಲ್ಲ ಅರಣ್ಯಗಳಲ್ಲೂ ಗಣಿಗಾರಿಕೆ, ರಸ್ತೆ ಅಗಲೀಕರಣ ಸಂಪೂರ್ಣ ನಿಷೇಧಿಸಬೇಕು.