

ಶಿರಸಿ: ಉತ್ತರ ಕನ್ನಡದ ಜನ ಬುದ್ಧಿವಂತರಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪ್ರತ್ಯೇಕ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟ ಸರ್ಕಾರದ ಗಮನಕ್ಕಿದೆ. ಜತೆಗೆ ನೂತನವಾಗಿ ಕದಂಬ ಕನ್ನಡ ಜಿಲ್ಲೆ ರಚನೆಯ ಕುರಿತು ಮುಖ್ಯಮಂತ್ರಿ, ಕಂದಾಯ ಸಚಿವರ ಗಮನಕ್ಕೆ ತರುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ ಹೇಳಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕದಂಬ ಕನ್ನಡ ಜಿಲ್ಲೆಗೆ ಆಗ್ರಹಿಸಿ ನಡೆದ ಹೋರಾಟದಲ್ಲಿ ಮನವಿ ಸ್ವೀಕರಿಸಿ ಸೋಮವಾರ ಅವರು ಮಾತನಾಡಿದರು.
ನಿಮ್ಮ ಜಿಲ್ಲೆಗಾಗಿ ಇಷ್ಟೊಂದು ಜನ ದೂರದ ಬೆಳಗಾವಿಗೆ ಬಂದಿರುವುದು ನಮ್ಮ ಗಮನಕ್ಕಿದೆ. ಇದನ್ನು ಕೂಡಲೇ ಸಂಬಂಧಪಟ್ಟ ಸಚಿವರಿಗೆ ತಲುಪಿಸಲಾಗುವುದು ಎಂದರು.
ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್, ಯಾವುದೇ ಜಿಲ್ಲೆ ಪ್ರತ್ಯೇಕ ಆಗಬೇಕಾದರೆ ಒಂದೆರಡು ದಿನಗಳಲ್ಲಿ ಆಗಲಾರದು. ಸಾಕಷ್ಟು ವರ್ಷಗಳ ನಿರಂತರ ಹೋರಾಟ ಅಗತ್ಯ. ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ದೀರ್ಘ ಸಮಯದಿಂದ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ವಿಶಾಲವಾಗಿದ್ದು, ವಿಸ್ತೀರ್ಣದಲ್ಲಿಯೂ ಉತ್ತರ ಕನ್ನಡ ದೊಡ್ಡದಾಗಿದೆ. ಎಲ್ಲ ತಾಲೂಕಿನಿಂದ ಪ್ರಬಲ ಜನಾಗ್ರಹ ರೂಪುಗೊಳ್ಳಬೇಕು. ಜಿಲ್ಲೆಯ ಸಾಹಿತಿಗಳು, ಬುದ್ಧಿಜೀವಿಗಳ ಸೇರಿ ಚಿಂತಕರು ಈ ಬಗ್ಗೆ ಹೆಚ್ಚು ಚರ್ಚೆ ನಡೆಯಬೇಕು. ನಾನೂ ಸಹ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುತ್ತೇನೆ ಎಂದು ಭರವಸೆ ನೀಡಿದರು.
ಅಧಿವೇಶನದ ಬಿಡುವಿನ ಸಮಯದಲ್ಲಿ ಪ್ರತಿಭಟನಾ ನಿರತ ಹೋರಾಟದ ಸ್ಥಳಕ್ಕೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ, ಪ್ರತಿಭಟನಾ ನಿರತ ಹೋರಾಟಗಾರರ ಆಗ್ರಹ ಆಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ಎಲ್ಲ ಶಾಸಕರು ಒಗ್ಗಟ್ಟಾಗಿ ಈ ಪ್ರಯತ್ನ ಪಡಬೇಕಿದೆ. ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿ, ಕಂದಾಯ ಮಂತ್ರಿಗಳ ಗಮನಕ್ಕೆ ಈ ವಿಷಯ ತರುವ ಕೆಲಸವನ್ನು ಮತ್ತು ಅಧಿವೇಶನದಲ್ಲಿ ಕದಂಬ ಕನ್ನಡ ಜಿಲ್ಲೆಯನ್ನಾಗಿ, ಬನವಾಸಿಯನ್ನು ತಾಲೂಕನ್ನಾಗಿ ಘೊಷಣೆ ಮಾಡುವಂತೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದರು.
ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಪ್ರತ್ಯೇಕ ಜಿಲ್ಲೆ ಹೋರಾಟ ಇದು ಕೇವಲ ಆರಂಭವಷ್ಟೇ. ಪ್ರತಿ ಪಂಚಾಯಿತಿ ಮಟ್ಟದಲ್ಲಿ ನಮ್ಮ ಹೋರಾಟ ಸಂಘಟಿತಗೊಳ್ಳುವುದರ ಜತೆಗೆ ಸಹಿ ಸಂಗ್ರಹ ಅಭಿಯಾನ ಎಲ್ಲ ತಾಲೂಕಿನಾದ್ಯಂತ ನಡೆಯಲಿದೆ ಎಂದರು.
ಪ್ರತಿಭಟನಾ ನಿರತ ಸ್ಥಳಕ್ಕೆ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಭೇಟಿ ನೀಡಿದರು. ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ 500ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಪ್ರಮುಖರಾದ ಜಯಶೀಲ ಗೌಡ, ಚಿದಾನಂದ ಹರಿಜನ, ಮಂಜುನಾಥ ಪಾಟೀಲ್, ಹಾಲಪ್ಪ ಜಕ್ಕಣ್ಣನವರ್, ಅನಿಲ ನಾಯಕ , ಅನಿಲ ಕರಿ, ಕಿರಣ ಮುಂಡಗೋಡು, ಸಲ್ಮಾ ಮುಂಡಗೋಡು, ಇತರರು ಇದ್ದರು.
ಇದು ಆರಂಭದ ಹೆಜ್ಜೆಯಷ್ಟೇ. ಇನ್ನು ಮುಂದಿನ ದಿನದಲ್ಲಿ ನಮ್ಮ ಹೋರಾಟ ತೀವ್ರಗೊಳ್ಳಲಿದೆ. ಎಲ್ಲ ತಾಲೂಕಿನ ಜನರನ್ನು ವಿಶ್ವಾಸಕ್ಕೆ ತೆೆಗೆದುಕೊಳ್ಳುವ ಮೂಲಕ ಹೋರಾಟವನ್ನು ಗ್ರಾಮ ಮಟ್ಟದಲ್ಲಿ ಸಂಘಟಿಸಲಾಗುವುದು. | ಅನಂತಮೂರ್ತಿ ಹೆಗಡೆ, ಅಧ್ಯಕ್ಷರು - ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್
ಪ್ರತ್ಯೇಕ ಜಿಲ್ಲೆಯ ಕೂಗಿಗೆ ನನ್ನ ಬೆಂಬಲ ಇದೆ. ಜಿಲ್ಲೆಯ ಎಲ್ಲ ಸಾಹಿತಿ, ಬುದ್ಧಿಜೀವಿಗಳು, ಜನತೆಯ ನಡುವೆ ಚರ್ಚೆ ನಡೆಯಲಿ. ನಾನೂ ಧ್ವನಿಗೂಡಿಸುತ್ತೇನೆ. - ಶಿವರಾಮ್ ಹೆಬ್ಬಾರ್, ಶಾಸಕ ಬೆಳಗಾವಿ ಅಧಿವೇಶನದಲ್ಲಿ ಕದಂಬ ಕನ್ನಡ ಪ್ರತ್ಯೇಕ ಜಿಲ್ಲೆ ಮತ್ತು ಬನವಾಸಿ, ಗೋಕರ್ಣ ತಾಲೂಕಿನ ರಚನೆಗಾಗಿ ಸದನದಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ. | ಭೀಮಣ್ಣ ನಾಯ್ಕ, ಶಾಸಕ