

ಜಮಖಂಡಿ: ನಗರಸಭೆ ಕಾರ್ಯಾಲಯದ ಮುಂದೆ ಪೌರ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಬುಧವಾರ 2ನೇ ದಿನವೂ ಮುಂದುವರಿಯಿತು.
ರಾಜ್ಯದ ಎಲ್ಲ ನಗರ ಸ್ಥಳೀಯ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ ಜ್ಯೋತಿ ಸಂಜೀವಿನಿ, ಕೆಜಿಐಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯ ನೀಡಿಬೇಕೆಂದು ಒತ್ತಾಯಿಸಿ ರಾಜ್ಯ ಪೌರ ನೌಕರರ ಸಂಘದ ತಾಲೂಕ ಘಟಕ ವತಿಯಿಂದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಪೌರ ನೌಕರರ ಸಂಘದ ತಾಲೂಕ ಅಧ್ಯಕ್ಷ ರಾಘು ಕಡಕೋಳ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿವಿಧ ವೃಂದ ಹೊರಗುತ್ತಿಗೆ ಕಾರ್ಮಿಕರನ್ನು ನಗರ ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಗೆ ಒಳಪಡಿಸಬೇಕು, ದಿನಗೂಲಿ ಕ್ಷೇಮ ಅಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನದಡಿಯಲ್ಲಿ ನೌಕರರನ್ನು ಖಾಯಂ ಮಾಡಿ ವಿಶೇಷ ನೇಮಕಾತಿಯಡಿ ಖಾಯಂಗೊಂಡ ನೌಕರರಿಗೆ ಎಸ್‌ಎ್ಸಿ ವೇತನ ಅನುದಾನದಿಂದ ವೇತನ ನಿಗದಿ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಪೌರಕಾರ್ಮಿಕರು ನಡೆಸುತ್ತಿರುವ ಮುಷ್ಕರಕ್ಕೆ ನಗರಸಭೆ ಕಚೇರಿ ನೌಕರರು ಮತ್ತು ಸಿಬ್ಬಂದಿ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆ ಕಚೇರಿಯಲ್ಲಿ ಯಾವುದೇ ಕೆಲಸ ನಡೆಯದ ಕಾರಣ ತಮ್ಮ ಕೆಲಸಕ್ಕಾಗಿ ಬಂದಿದ್ದ ಸಾರ್ವಜನಿಕರು ವಾಪಾಸಾದ ಪ್ರಸಂಗ ಕಂಡುಬಂತು.
ತಹಸೀಲ್ದಾರ್ ಸದಾಶಿವ ಮಕ್ಕೋಜಿ, ಪೌರಾಯುಕ್ತ ಜ್ಯೋತಿ ಗಿರೀಶ್, ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ಕಚೇರಿ ವ್ಯವಸ್ಥಾಪಕಿ ಚಂದ್ರಿಕಾ ಬಿಳ್ಳೂರ, ಕುಸುಮಾ ಸಪಡ್ಲಾ, ಹಿರಿಯ ಆರೋಗ್ಯ ನಿರೀಕ್ಷಕ ವಿನಾಯಕ ನಿಡೋನಿ, ಮಂಜುನಾಥ, ರಾಜಕುಮಾರ ಇದ್ದರು.