ಅಸ್ಪಶ್ಯತೆ ವಿರುದ್ಧದ ಹೋರಾಟ ಅವಿಸ್ಮರಣೀಯ

5ark1
Published on
  • ಹಾಸನ: ದೇಶಕ್ಕಾಗಿ ಶ್ರಮಿಸಿದ ಡಾ.ಬಾಬು ಜಗಜೀವನರಾಮ್ ಅವರು ತಮ್ಮ ಬದುಕಿನುದ್ದಕ್ಕೂ ಎಲ್ಲ ಕ್ಷೇತ್ರಗಳಿಗೂ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕ ಎಂದು ತಹಸೀಲ್ದಾರ್ ಬಸವ ರೆಡ್ಡಪ್ಪ ರೋಣದ ಬಣ್ಣಿಸಿದರು.

  • ಅರಕಲಗೂಡು ಪಟ್ಟಣದಲ್ಲಿ ತಾಲೂಕ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ 117ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

  • ಸಮಾಜದಲ್ಲಿನ ಅಸ್ಪಶ್ಯತೆಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದಿದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಗಣನೀಯ ಬದಲಾವಣೆ ತಂದರು. ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಜತೆಗೆ ಆಹಾರ ಉತ್ಪಾದನೆ ಹೆಚ್ಚಿಸಿದರು ಎಂದರು.

  • ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆಯಾಗುವುದರಲ್ಲಿ ಜಗಜೀವನರಾಮ್ ಅವರ ಪಾತ್ರ ಮಹತ್ವವಾದದ್ದು ಎಂದು ಹೇಳಿದರು.
  • ಇದಕ್ಕೂ ಮುನ್ನ ತಾಲೂಕು ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಬಿಇಒ ದೇವರಾಜ್, ಸಬ್ ಇನ್‌ಸ್ಪೆಕ್ಟರ್ ಕಾಳೇಗೌಡ, ಪಪಂ ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ರವಿಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net