

ಕೆ.ಆರ್.ನಗರ: ಶಾಲೆಯ ಸುತ್ತಲೂ ಬೆಳೆದು ನಿಂತ ಅನುಪಯುಕ್ತ ಗಿಡಗಂಟಿಗಳಿಂದಾಗಿ ಮಕ್ಕಳು ಆಟದಿಂದ ವಂಚಿತರಾಗುವಂತಾಗಿದ್ದು, ಇದನ್ನು ಕಂಡರೂ ಕಾಣದಂತಿರುವ ಶಿಕ್ಷಕರು ಹಾಗೂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ಹೌದು, ಇದು ಪಟ್ಟಣದ ಹಳೇಸಂತೆ ಮೈದಾನದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮತ್ತು ಕಸ್ತೂರಿ ಬಾ ಶಾಲೆಗೆ ಹೊಂದಿಕೊಂಡತಿರುವ ಶ್ರೀ ಕೃಷ್ಣರಾಜೇಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸ್ಥಿತಿ. ಶಾಲಾ-ಕಾಲೇಜ ಸಮೀಪ ವಿಶಾಲವಾದ ಮೈದಾನವಿದ್ದರೂ ಆಳುದ್ದ ಬೆಳೆದು ನಿಂತಿರುವ ಗಿಂಡಗಂಟಿಗಳಿಂದಾಗಿ ಎಲ್ಲರು ಒಂದೇ ಮೈದಾನ ಬಳಕೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಕೆ.ಆರ್.ನಗರ ಪಟ್ಟಣ ನಿರ್ಮಾಣವಾದ ಸಂದರ್ಭ ಹಳೇ ಸಂತೆಮೈದಾನದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮತ್ತು ಅದರ ಪಕ್ಕದಲ್ಲಿರುವ ಶ್ರೀ ಕೃಷ್ಣರಾಜೇಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜು(ಜೂನಿಯರ್ ಕಾಲೇಜು) ಕೂಡ ಚಾಲ್ತಿಗೆ ಬಂತು. ಇಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಕಲಿತಿದ್ದು, ಪ್ರಸ್ತುತ ಸಾಕಷ್ಟು ಜನರು ಉನ್ನತ ಸ್ಥಾನ ಅಲಂಕರಿಸಿ ಬದುಕು ಕಟ್ಟಿಕೊಂಡಿದ್ದಾರೆ. ಅಂತೆಯೇ ಕೆಲವರು ಇಲ್ಲಿಯೇ ಬೋಧಕರಾಗಿ, ಸಿಬ್ಬಂದಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಇತಿಹಾಸ ಹೊಂದಿರುವ ಈ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದರಿಂದ ತೆರವು ಮಾಡಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಶಾಲಾ ಸುತ್ತಮುತ್ತಲಿನ ಆವರಣದಲ್ಲಿ ಸ್ವಚ್ಛತೆ, ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಮಾತ್ರ ಮರೀಚಿಕೆ. ಇದರ ಬದಲಾಗಿ ಗಿಡಗಂಟಿಗಳ ನಡುವೆ ಇರುವ ಕೊಳಾಯಿ ನೀರನ್ನೇ ಬಳಸಬೇಕಾಗಿದೆ.
ಶಾಲೆಯ ಮುಂಭಾಗ ಮತ್ತು ಎಡ ಭಾಗದಲ್ಲಿ ವಿಶಾಲವಾದ ಜಾಗವಿದ್ದರೂ ಸ್ವಚ್ಛತೆ ಇಲ್ಲದ ಕಾರಣ ಗಿಡಗಂಟಿ ಬೆಳೆದು ಇಡೀ ಶಾಲಾ ಆವರಣವನ್ನೇ ಆವರಿಸಿದೆ. ಶಾಲೆಯ ಮುಂಭಾಗದಲ್ಲಿರುವ ಕಾಲೇಜಿನಲ್ಲಿ 8ರಿಂದ ದ್ವಿತೀಯ ಪಿಯುಸಿವರೆಗೆ ನೂರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಇಲ್ಲಿನ ಕೊಠಡಿಗಳು ಮತ್ತು ಕಿಟಕಿಗಳ ಪಕ್ಕದಲ್ಲಿಯೇ ಗಿಡಗಂಟಿ ಬೆಳೆದುಕೊಂಡಿದ್ದು, ಸತ್ತು ಬಿದ್ದಿರುವ ಕೊಳೆತ ನಾಯಿಗಳು, ಪ್ರಾಣಿ ಪಕ್ಷಿಗಳ ದುರ್ವಾಸನೆಯಲ್ಲಿಯೇ ಮಕ್ಕಳು ಪಾಠ ಕಲಿಯಬೇಕಾಗಿದೆ. ಇದರೊಂದಿಗೆ ಹಾವು ಚೇಳುಗಳೂ ಇಲ್ಲಿ ಕಾಣಿಸಿಕೊಳ್ಳಲಿದೆ. ಇನ್ನು ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಕಸ್ತೂರಿ ಬಾ ವಸತಿ ಶಾಲೆಯಿದ್ದು, 93 ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಕಟ್ಟಡದ ಸುತ್ತ ಕಾಂಪೌಂಡ್ ಇದ್ದರೂ ರಾತ್ರಿ ವೇಳೆ ಹೊರ ಬರಲು ಜೀವ ಕೈಯಲ್ಲಿಡಿದು ಬರಬೇಕಾದ ಪರಿಸ್ಥಿತಿ ಇದೆ.
ಅನೈತಿಕ ಚಟುವಟಿಕೆಗಳ ತಾಣ; ಈ ಕಾಲೇಜು ಮೈದಾನದ ಸುತ್ತ ಡಾ.ಬಿ.ಆರ್.ಅಂಬೇಡ್ಕರ್ ಬಾಲಕರ ವಸತಿ ನಿಲಯ, ಪ್ರಥಮ ದರ್ಜೆ, ಮಹಿಳಾ ಪ್ರಥಮ ದರ್ಜೆ, ಬಾಲಕರ ಮತ್ತು ಬಾಲಕೀಯರ ಪದವಿ ಪೂರ್ವ ಕಾಲೇಜು, ಕಸ್ತೂರಿ ಬಾ ವಸತಿ ವಿದ್ಯಾಲಯ ಇರುವುದರಿಂದ ರಾತ್ರಿ ವೇಳೆ ಪೊಲೀಸರು ಗಸ್ತು ಮಾಡುತ್ತಾರೆ. ಆದರೂ ಕೂಡ ಪ್ರಾಥಮಿಕ ಶಾಲೆಯ ಜಗುಲಿ, ಮೆಟ್ಟಿಲುಗಳ ಮೇಲೆ ಕುಳಿತು ಕೆಲವು ಕಿಡಿಗೇಡಿಗಳು ಮದ್ಯಪಾನ ಮಾಡುವುದು, ಗಾಂಜಾ ಸೇವನೆ ಮಾಡುವುದು ಸಾಮಾನ್ಯ. ಇದರೊಂದಿಗೆ ವೇಶ್ಯವಾಟಿಕೆಯೂ ನಡೆಯುತ್ತದೆ ಎಂಬ ದೂರು ಕೇಳಿ ಬರುತ್ತಿವೆ.\
ಎರಡು ಬಾರಿ ಚಿರತೆ ಪ್ರತ್ಯಕ್ಷ: ಶ್ರೀ ಕೃಷ್ಣರಾಜೇಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂಭಾಗದ ಪ್ರದೇಶದಲ್ಲಿ ವರ್ಷದ ಹಿಂದೆಯಷ್ಟೇ ಚಿರತೆ ಪ್ರತ್ಯಕ್ಷವಾಗಿತ್ತು. ಈ ಸಂದರ್ಭ ನಾಲ್ಕೈದು ಜನರ ಮೇಲೆ ದಾಳಿ ಮಾಡಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಅದರ ಸೆರೆಗೆ ಬೋನು ಇಡಲಾಗಿತ್ತು. ಚಿರತೆ ಸೆರೆ ಆಗುವವರೆಗೆ ಶಾಲಾ-ಕಾಲೇಜಿಗೆ ರಜೆ ಘೋಷಿಸಿ ಆನಂತರ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಇದೀಗ ಮತ್ತೊಮ್ಮೆ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಸರ್ಕಾರ ಪ್ರತಿ ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕೆಂದು ಪ್ರತಿ ವರ್ಷ ಕೋಟ್ಯಂತರ ರೂ. ಖರ್ಚು ಮಾಡುತ್ತದೆ.
ಆದರೆ ವಿಶಾಲವಾದ ಮೈದಾನಗಳನ್ನು ಹೊಂದಿದ್ದರೂ ಕೂಡ ಕಾಡಿನಲ್ಲಿರುವಂತೆ ವಿದ್ಯಾರ್ಥಿಗಳು ಕಲಿಯಬೇಕಾದ ಪರಿಸ್ಥಿತಿ ಇದೆ. ಇದನ್ನು ಸ್ವಚ್ಛಗೊಳಿಸುವುದು ಯಾರು ಎಂಬ ಪ್ರಶ್ನೆ ಸಾರ್ವಜನಿಕರದ್ದು. ಉತ್ತಮ ಬೋಧಕರ ಜತೆಗೆ ಉತ್ತಮ ಶೈಕ್ಷಣಿಕ ವಾತಾವರಣ ಇರಬೇಕು. ಇಲ್ಲವಾದರೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಈಗಾಗಲೇ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಮತ್ತಷ್ಟು ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಬಡವರ ಮಕ್ಕಳೇ ಹೆಚ್ಚಾಗಿ ಕಲಿಯುತ್ತಾರೆ. ಅಲ್ಲದೆ ಹೆಣ್ಣುಮಕ್ಕಳ ಕಸ್ತೂರಿ ಬಾ ಶಾಲೆಗೆ ರಾತ್ರಿವೇಳೆ ಕತ್ತಲು ಆವರಿಸುವುದರಿಂದ ಸೂಕ್ತ ಭದ್ರತೆ ಇರಲ್ಲ. ಅಲ್ಲದೆ ಮುಂಭಾಗ ಮತ್ತು ಪಕ್ಕದಲ್ಲಿ ಬೆಳೆದಿರುವ ಗಿಡಗಂಟಿಗಳಲ್ಲಿ ಹಾವು, ಚೇಳುಗಳಿವೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ಆ ಪ್ರದೇಶವನ್ನು ಸ್ವಚ್ಛಗೊಳಿಸಿಕೊಟ್ಟರೆ ವಿದ್ಯಾರ್ಥಿಗಳಿಗೆ ಅನುಕೂಲ.
ರಕ್ಷಿತ್ ಪ್ರಧಾನ ಕಾರ್ಯದರ್ಶಿ, ಭಗತ್ ಸಿಂಗ್ ಯೂತ್ ಫೌಂಡೇಷನ್
ಲಭ್ಯವಿರುವ ಅನುದಾನವನ್ನು ಬಳಕೆ ಮಾಡಿಕೊಂಡು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವದು. ಅಲ್ಲದೆ ಆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಅನುದಾನ ಕಡಿಮೆ ಇದೆ. ಅಲ್ಲದೆ ಕಾಲೇಜು ಕ್ಯಾಂಪಸ್ ಜಾಗವೇ ಹೆಚ್ಚಾಗಿರುವುದರಿಂದ ಅವರು ಹೆಚ್ಚಿನ ಕ್ರಮ ವಹಿಸಬೇಕು. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಪುರಸಭೆಯವರೊಂದಿಗೆ ಚರ್ಚಿಸಿ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು.
ಆರ್.ಕೃಷ್ಣಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ, ಕೆ.ಅರ್.ನಗರ.