ಉಳವಿ ಚನ್ನಬಸವೇಶ್ವರರ ಜಾತ್ರಾ ಮಹೋತ್ಸವ

11-klg 1
Published on

ಕಲಘಟಗಿ: ತಾಲೂಕಿನ ಜಿನ್ನೂರು ಗ್ರಾಮದ ಸುಕ್ಷೇತ್ರ ಶ್ರೀ ಉಳವಿ ಚನ್ನಬಸವೇಶ್ವರರ ಜಾತ್ರಾ ಮಹೋತ್ಸವ ಫೆ. 13ರಿಂದ 15ರ ವರೆಗೆ ಜರುಗಲಿದೆ.

ಚಿನ್ಮಯ ಜ್ಞಾನಿ ಶ್ರೀ ಉಳವಿ ಚನ್ನಬಸವಣ್ಣನವರು ವಚನ ಸಾಹಿತ್ಯದ ಹೊತ್ತಿಗೆಗಳನ್ನು ಹೊತ್ತುಕೊಂಡು ಸುಕ್ಷೇತ್ರ ಉಳವಿ ಕ್ಷೇತ್ರಕ್ಕೆ ಸಂಚರಿಸುವಾಗ ಮಧ್ಯಂತರದಲ್ಲಿ ಜಿನ್ನೂರು ಗ್ರಾಮದ ಕಾಡಶೆಟ್ರ ಮನೆಯಲ್ಲಿ ನೆಲಸಿದ್ದರೆಂಬ ಪ್ರತೀತಿ ಇದೆ, ಶರಣರು ತಮ್ಮ ಕುರುಹುಗಳನ್ನು ಈ ಗ್ರಾಮದಲ್ಲಿ ಬಿಟ್ಟು ಹೋಗಿದ್ದರಿಂದ ಗ್ರಾಮಸ್ಥರು ಶರಣರ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷ ಭಾರತ ಹುಣ್ಣಿಮೆಯ ದಿನದಂದು ಆಚರಿಸುತ್ತ ಬರುವ ವಾಡಿಕೆಯಿದೆ.

ಫೆ. 13ರಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಚನ್ನಬಸವಣ್ಣನವರ ಮಹಾಮೂರ್ತಿ, ಶ್ರೀ ಗುಡ್ಡದ ಬಸವೇಶ್ವರ ಮತ್ತು ಶ್ರೀ ರಾಚಪ್ಪಜ್ಜನವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ಮತ್ತು ಮಧ್ಯಾಹ್ನ ಅನ್ನಪ್ರಸಾದ ಕಾರ್ಯಕ್ರಮ ಜರುಗಲಿದೆ. ಸಂಜೆ 4 ಗಂಟೆಗೆ ಡೊಳ್ಳುಕುಣಿತ, ಕರಡಿ ಮಜಲು, ನಂದಿಕೋಲು ಕುಣಿತ, ಭಜನೆ ಸೇರಿ ವಿವಿಧ ವಾದ್ಯ ಮೇಳಗಳೊಂದಿಗೆ ಶ್ರೀ ಚನ್ನಬಸವಣ್ಣವರ ಉತ್ಸವ ಮೂರ್ತಿಯ ಪಾಲಕಿ ಮೆರವಣಿಗೆ ನೆರವೇರಲಿದೆ.

ಈ ಜಾತ್ರಾ ಮಹೋತ್ಸವದಲ್ಲಿ ವಿವಿಧ ಮಠಾಧೀಶರಿಂದ ಧರ್ಮಸಭೆ ಜರುಗಲಿದ್ದು, ಫೆ. 15ರಂದು ಕಡುಬಿನ ಕಾಳಗ ಮತ್ತು ಶಿರಹಟ್ಟಿ ಮಠದ ಶ್ರೀ ಫಕೀರ ಸಿದ್ಧರಾಮ ಸ್ವಾಮಿಗಳ ಪಲ್ಲಕ್ಕಿ ಮೆರವಣಿಗೆ ನೆರವೇರಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net