ಉದ್ಭವಮೂರ್ತಿ ಬಸವಣ್ಣನ ಜಾತ್ರೋತ್ಸವ 11ರಿಂದ

9 SHIROLA
Published on

ಶಿರೋಳ: ತಾಲೂಕಿನ ಶಿರೋಳ ಸಮೀಪದ ಉದ್ಭವಮೂರ್ತಿ ಕಲ್ಲಾಪುರದ ಬಸವಣ್ಣನ ಜಾತ್ರಾ ಮಹೋತ್ಸವ ಸೆ.11ರಿಂದ ಒಂದು ವಾರ ಅದ್ಧೂರಿಯಾಗಿ ಜರುಗಲಿದೆ. ಜಾತ್ರೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

11ರಂದು ಬೆಳ್ಳಿಗೆ 6ಗಂಟೆಗೆ ರುದ್ರಾಭಿಷೇಕ, ಮಧ್ಯಾಹ್ನ ಮಹಾಪ್ರಸಾದ, ಸಾಯಂಕಾಲ 5ಗಂಟೆಗೆ ಕರಡಿಮೇಳ, ಮುತ್ತೈದೆಯರಿಂದ ಆರತಿ, ನಂದಿಕೋಲಿನ ಮೆರವಣಿಗೆ ಜರುಗಲಿದೆ. ಬಳಿಕ ಸಕಲ ವಾದ್ಯ ವೈಭವಗಳೊಂದಿಗೆ ಹರ-ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಮಹಾರಥೊತ್ಸವ ನಡೆಯಲಿದೆ.

ಗ್ರಾಮದ ಕೆಎಸ್‌ಆರ್‌ಟಿಸಿ, ಕೆಇಬಿ ಮತ್ತು ಲಾರಿ ಚಾಲಕರಿಂದ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಲಿದೆ. 11ರಂದು ಶ್ರೀ ಬಸವೇಶ್ವರ ನಾಟ್ಯ ಸಂಘದಿಂದ ‘ವಿಷದ ಹುತ್ತಕ್ಕೆ ಹಾಲೆರೆದ ಮುತ್ತೈದೆ’ ಹಾಗೂ 13ರಂದು ಶ್ರೀ ಅಮೋಘ ಸಿದ್ಧೇಶ್ವರ ನಾಟ್ಯ ಸಂಘದಿಂದ ‘ಹಾಲುಮತದ ಹುಲಿ’ ಎಂಬ ನಾಟಕಗಳು ರಾತ್ರಿ 10.30ಕ್ಕೆ ಪ್ರದರ್ಶನಗೊಳ್ಳಲಿವೆ. ಎತ್ತುಗಳನ್ನು ಕಲ್ಲಾಪುರ ಬಸವಣ್ಣನ ದೇವಸ್ಥಾನಕ್ಕೆ ತಂದು ಐದು ಸುತ್ತು ಪ್ರದಕ್ಷಿಣೆ ಹಾಕಿಸಿದರೆ ಅವುಗಳಿಗೆ ರೋಗನಿರೋಧಕ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ. ಶ್ರಾವಣಮಾಸದ ಐದು ಸೋಮವಾರ ಗದಗ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಕೊಪ್ಪಳ ಜಿಲ್ಲೆಗಳಿಂದ ರೈತರು ದೇವಸ್ಥಾನಕ್ಕೆ ಎತ್ತುಗಳನ್ನು ತಂದು ದೇವಸ್ಥಾನ ಐದುಸುತ್ತ ಪ್ರದರ್ಶನ ಹಾಕಿಸುತ್ತಾರೆ. ಹಲವಾರು ವರ್ಷಗಳಿಂದ ಈ ಸಂಪ್ರದಾಯ ಮುಂದುವರಿಯುತ್ತಿದೆ.

ದೇವಸ್ಥಾನದ ಹಿನ್ನೆಲೆ: ಮಲಪ್ರಭಾ ನದಿಯ ದಡದಲ್ಲಿನ ಕಲ್ಲಾಪುರ ಗ್ರಾಮದಲ್ಲಿ ಕಾಲಜ್ಞಾನಿಯಾದ ಚನ್ನಬಸವಣ್ಣ ಈ ಹಳ್ಳಿಯಲ್ಲಿ ನಂದೀಶನ ಅವತಾರವಾಗಿ ಬಂದು ಈ ಗ್ರಾಮ ಪುಣ್ಯಕ್ಷೇತ್ರವಾಗುವುದು ಎಂದು ನುಡಿದ್ದನಂತೆ. ಗ್ರಾಮದ ಶಿವಭಕ್ತ ಯಲ್ಲಪ್ಪಗೌಡರ ಹೊಲದಲ್ಲಿ ರಂಟಿ ಹೊಡಿಯುವಾಗ ಐದು ಸುತ್ತು ಆದ ನಂತರ ಎತ್ತುಗಳು ಸುಮ್ಮನೆ ನಿಂತುಕೊಂಡವು. ಆಗ ಯಲ್ಲಪ್ಪಗೌಡರು ಆ ಜಾಗವನ್ನು ಪರಿಶೀಲಿಸಿ ಅಲ್ಲಿ ನಿಧಿ ಇರಬಹುದು ಎಂದು ಸರ್ಕಾರಕ್ಕೆ ತಿಳಿಸಿದರು. ಪಂಚಾಯಿತಿಯವರು ಆ ಸ್ಥಳದಲ್ಲಿ ಶೋಧಕಾರ್ಯ ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಬಸವಣ್ಣ ವಿಗ್ರಹ ಅಲ್ಲಿ ಕಾಣಿಸಿಕೊಂಡಿತು. ಅಲ್ಲಿದ್ದ ಜನರೆಲ್ಲ ಕೈಮುಗಿದು, ಪಂಡಿತರು, ಸ್ವಾಮೀಜಿಗಳು ಹಾಗೂ ಮುತ್ತೈದೆಯರನ್ನು ಕರೆದುಕೊಂಡು ಬಂದು ಪೂಜೆ ಸಲ್ಲಿಸಿದ ಯಜ್ಞ ಹೋಮ ಕೈಗೊಂಡರು. ಅಂದಿನಿಂದ ಕಲ್ಲಾಪುರ ಸುಕ್ಷೇತ್ರವಾಯಿತು, ಬಸವಣ್ಣ ಭಕ್ತರ ಆರಾಧ್ಯ ದೈವವಾದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net