

ಕೆ.ಆರ್.ನಗರ: ತಾಲೂಕಿನ ಕಾಳೇನಹಳ್ಳಿ, ಕೆಂಪನಕೊಪ್ಪಲು, ಹೊಸಕೊಪ್ಪಲು, ಮಾರಿಗುಡಿಕೊಪ್ಪಲು ಮತ್ತು ಕನಕನಗರ ಹೊಸ ಬಡಾವಣೆಯ ಗ್ರಾಮ ದೇವತೆಗಳ ಹಬ್ಬದ ಉತ್ಸವ ವಿಜೃಂಭಣೆಯಿಂದ ಜರುಗಿತು.
ಕೆ.ಆರ್.ನಗರ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಈ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿ, ಬೆಳೆ ಬೆಳೆದು ರೈತರು ಮತ್ತು ರಾಜ್ಯ ಸುಭಿಕ್ಷವಾಗಿರಲಿ ಎಂಬ ಭಾವದಿಂದ ಈ ಹಬ್ಬವನ್ನು ಪ್ರತಿ ವರ್ಷ ಜೂನ್‌ನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮ ದೇವತೆಗಳಾದ ವೆಂಕಟೇಶ್ವರಸ್ವಾಮಿ, ಬಸವೇಶ್ವರಸ್ವಾಮಿ ಮತ್ತು ಮಾರಮ್ಮ ದೇವರ ಉತ್ಸವವನ್ನು ನಡೆಸುವ ಗ್ರಾಮಸ್ಥರು ಶನಿವಾರ ರಾತ್ರಿ ಎಲ್ಲ ದೇವರುಗಳ ಉತ್ಸವ ಮೂರ್ತಿಗಳನ್ನು ಪಟ್ಟಣದ ಹೊರವಲಯದಲ್ಲಿರುವ ಹಳೇ ಎಡತೊರೆಯ ದಕ್ಷಿಣಗಂಗೆ ಕಾವೇರಿ ನದಿಯಲ್ಲಿ ಗಂಗಾ ಪೂಜೆ ನಡೆಸಿ, ಐದು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ತಮಟೆ, ಮಂಗಳವಾದ್ಯ, ಕೊಂಬು, ಕಹಳೆಗಳೊಂದಿಗೆ ವೈಭವದ ಮೆರವಣಿಗೆ ನಡೆಸಿದರು.
ದೇವರ ಉತ್ಸವದ ಮೆರವಣಿಗೆ ತೆರಳುವ ರಸ್ತೆಗಳನ್ನು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಬಣ್ಣ ಬಣ್ಣದ ರಂಗೋಲಿಗಳಿಂದ ಶೃಂಗರಿಸಿದ್ದರು. ಇದರ ಜತೆಗೆ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು, ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸೋಮವಾರ ಬೆಳಗ್ಗೆ ನಾಲ್ಕು ಗ್ರಾಮಗಳಲ್ಲಿರುವ ಮಾರಮ್ಮ ತಾಯಿ ದೇವಾಲಯಕ್ಕೆ ತಂಬಿಟ್ಟು ಆರತಿಯೊಂದಿಗೆ ತೆರಳಿದ ಹೆಣ್ಣು ಮಕ್ಕಳು ದೇವತೆಗೆ ವಿವಿಧ ನೈವೇದ್ಯ ಅರ್ಪಿಸಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ಗ್ರಾಮ ದೇವತೆಗಳ ಉತ್ಸವದ ಮೆರವಣಿಗೆ ತಮ್ಮ ಮನೆ ಬಾಗಿಲಿಗೆ ಬಂದಾಗ ಹೆಣ್ಣು ಮಕ್ಕಳು ಸೇರಿದಂತೆ ಬಂಧುಗಳ ಜತೆಗೂಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವರ ಕುಣಿತ, ಮಂಗಳವಾದ್ಯ, ತಮಟೆ ಮತ್ತಿತರ ಸಾಂಪ್ರದಾಯಿಕ ಕುಣಿತಗಳು ಗ್ರಾಮಸ್ಥರನ್ನು ಆಕರ್ಷಿಸಿದವು.
ದೇವರ ಉತ್ಸವ ನಾಲ್ಕು ಗ್ರಾಮಗಳ ಯಜಮಾನರ ಸಮ್ಮುಖದಲ್ಲಿ ಹಬ್ಬ ವ್ಯವಸ್ಥಿತವಾಗಿ ಜರುಗಿತು. ಯಜಮಾನರಾದ ಕೆ.ಎಂ.ಮಹದೇವ್, ಕೆ.ಜೆ.ಕುಮಾರ್, ದೇವರಾಜು, ಚನ್ನಕೇಶವ, ಸಿದ್ದೇಗೌಡ, ರಾಜೇಗೌಡ, ನಾಗೇಗೌಡ, ರಾಮೇಗೌಡ, ಗ್ರಾ.ಪಂ. ಸದಸ್ಯರಾದ ಕೆ.ಪಿ.ಜಗದೀಶ್, ಮಹೇಶ್‌ಗೌಡ, ಪಲ್ಲವಿ ರಾಮಲಿಂಗು, ಶ್ವೇತಾರವಿ, ಸವಿತಾಸ್ವಾಮಿಗೌಡ, ಲಕ್ಷ್ಮೀ, ಮಹದೇವ್, ಮಾಜಿ ಸದಸ್ಯರಾದ ಕೆ.ಎನ್.ರವಿ, ಕುಂದೂರು ಮಹದೇವ್, ಅರ್ಚಕರಾದ ವೆಂಕಟೇಶ್, ಮಾದೇಶ್, ಧನುಕುಮಾರ್ ಇದ್ದರು.