ಶ್ರೀಗುರು ನಿತ್ಯಾನಂದ ಆಶ್ರಮದ ಜಾತ್ರಾ ಮಹೋತ್ಸವ

hly jatre
Published on

ಹಳಿಯಾಳ: ಸಿದ್ದಾರೂಢ ಪರಂಪರೆಯ ಮಠವಾಗಿರುವ ತಾಲೂಕಿನ ಕೆ.ಕೆ. ಹಳ್ಳಿಯ ಶ್ರೀಗುರು ನಿತ್ಯಾನಂದ ಆಶ್ರಮದ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ವಿಜೃಂಭಣೆಯಿಂದ ರಥೋತ್ಸವ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಕೆ.ಕೆ. ಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಸಿದ್ಧಾರೂಢ ಸ್ವಾಮೀಜಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲುಮುಟ್ಟಿತು. ದೇಗುಲದಿಂದ ಮುಖ್ಯದ್ವಾರದವರೆಗೆ ರಥ ಎಳೆದು, ದೇವಸ್ಥಾನಕ್ಕೆ ವಾಪಸಾಗುವವರೆಗೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ಸಿದ್ಧಾರೂಢ ಶ್ರೀಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಡೊಳ್ಳು, ಭಜನೆ, ಸಿದ್ಧಾರೂಢರ ಕುರಿತ ಹಾಡುಗಳು ಮೆರುಗು ನೀಡಿದವು. ವಿವಿಧ ಸಂಘ- ಸಂಸ್ಥೆಗಳು, ಭಕ್ತರಿಗೆ ಪ್ರಸಾದ, ತಂಪುಪಾನೀಯ ವ್ಯವಸ್ಥೆ ಮಾಡಿದ್ದವು. ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net