

ಯಲ್ಲಾಪುರ: ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಈಶ್ವರ, ನಂದಿ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾ ಮಹೋತ್ಸವ ಎರಡು ದಿನಗಳಿಂದ ನಡೆಯುತ್ತಿದೆ. ಈಶ್ವರ, ನಾಗ, ನಂದಿ ಹಾಗೂ ಪರಿವಾರ ದೇವತೆಗಳ ಪುನರ್ ಪ್ರತಿಷ್ಠೆಯನ್ನು ಶುಕ್ರವಾರ ಬೆಳಗ್ಗೆ ನೆರವೇರಿಸಲಾಯಿತು. ಗುರುವಾರದಿಂದ ಪ್ರತಿಷ್ಠಾ ಪೂರ್ವಾಂಗ ವಿಧಿ ವಿಧಾನಗಳು ವೇ.ನಾರಾಯಣ ಭಟ್ಟ ಬೆಣ್ಣೆ ಅವರ ಮಾರ್ಗದರ್ಶನದಲ್ಲಿ ನಡೆದವು. ಶನಿವಾರ ಚಂಡಿಕಾಹವನ, ಪೂರ್ಣಾಹುತಿ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯೊಂದಿಗೆ ಪ್ರತಿಷ್ಠಾ ಮಹೋತ್ಸವ ಸಂಪನ್ನಗೊಳ್ಳಲಿದೆ.