

ಬಾಗಲಕೋಟೆ: ಐಪಿಎಲ್‌ನಲ್ಲಿ ಆರ್‌ಸಿಬಿ ಕಪ್ ಗೆಲ್ಲಬೇಕು ಎಂದು ರಾಜ್ಯಾದ್ಯಂತ ಅಭಿಮಾನಿಗಳು ಒಂದಲ್ಲ, ಎರಡಲ್ಲ ಬರೊಬ್ಬರಿ 18 ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ದಿನ ಕೊನೆಗೂ ಮಂಗಳವಾರ ತಡರಾತ್ರಿ ಈಡೇರಿದೆ.
ಐಪಿಎಲ್ ಆರಂಭದಿಂದಲೂ 18 ಸೀಸನ್‌ಗಳಲ್ಲಿ ಆರ್‌ಸಿಬಿ ತಂಡದಲ್ಲಿ ಇರುವ ವಿರಾಟ್ ಕೊಯ್ಲಿ ಹಾಗೂ ಅಪರ ಕೋಟ್ಯಂತರ ಅಮಾನಿಗಳ ಆಸೆ ಒಂದೇ ಆಗಿತ್ತು. ಈ ಸಲ ಕಪ್ ನಮ್ದೆ ಎನ್ನುವುದು. ಅದು 18ನೇ ವರ್ಷಕ್ಕೆ ಇಡೇರಿದೆ.
ಆರ್‌ಸಿಬಿ ತಂಡ ಫೈನಲ್‌ಗೆ ಹೋದ ದಿನದಿಂದಲೇ ಕ್ರಿಕೆಟ್ ಅಭಿಮಾನಿಗಳು ಈ ಸಲ ಕಪ್ ನಮ್ದೆ ಎನ್ನುವ ದೃಢ ವಿಶ್ವಾಸದಲ್ಲೆ ಇದ್ದರು. ಅದರಂತೆ ಪಂದ್ಯದ ದಿನವಾದ ಮಂಗಳವಾರ ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧೆಡೆ ಆರ್‌ಸಿಬಿ ಅಭಿಮಾನಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹರಿಕೆ, ಪ್ರಾರ್ಥನೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿತ್ತು.
ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥನೆ, ಪೂಜೆ ಫಲವೆನ್ನುವಂತೆ ಅಂತಿಮ ಹಣಾಹಣಿಯಲ್ಲಿ ಆರ್‌ಸಿಬಿ ಪಂಜಾಬ ವಿರುದ್ಧ ವಿಜಯದ ಕೇಕೆ ಹಾಕುವ ಮೂಲಕ 18 ವರ್ಷಗಳ ಆರ್‌ಸಿಬಿ ತಂಡದ ಕೋಟ್ಯಂತರ ಅಭಿಮಾನಿಗಳ ಆಸೆಯನ್ನು ಈಡೇರಿಸಿದೆ. ಆರ್‌ಸಿಬಿ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ಆರ್‌ಸಿಬಿ ಹಾಗೂ ಪಂಜಾಬ ನಡುವೆ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಪಂದ್ಯ ಗೆಲ್ಲಲಿ ಎಂದು ಬಾಗಲಕೋಟೆ ವಿದ್ಯಾಗಿರಿ ಹನುಮಾನ ದೇವಸ್ಥಾನದಲ್ಲಿ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಹಾಗೂ ಆರ್‌ಸಿಬಿ ಅಭಿಮಾನಿಗಳು ಸೇರಿಕೊಂಡು ವಿಶೇಷ ಪೂಜೆ ಸಲ್ಲಿಸಿದರು. ಪ್ರಾರ್ಥನೆ, ಮಂಗಳಾರತಿ, ಕರ್ಪೂರದಾರತಿ ಬೆಳಗುವ ಮೂಲಕ ತಂಡಕ್ಕೆ ಶುಭಕೋರಿದರು. ಗೆದ್ದು ಬಾ ಆರ್‌ಸಿಬಿ, ಈ ಸಲ ಕಪ್ ನಮ್ದೆ ಎನ್ನುವ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.
ಇಳಕಲ್ಲ ತಾಲೂಕಿನ ಕರಡಿ ಗ್ರಾಮದಲ್ಲಿ ಆರ್‌ಸಿಬಿ ತಂಡ ಗೆಲ್ಲಲಿ ಎಂದು ಬಸವಣ್ಣ ದೇವರಿಗೆ 201 ಟೆಂಗಿನ ಕಾಯಿ ಒಡೆದು ಪ್ರಾರ್ಥಿಸಿದರು. ಈ ಸಲ ಆರ್‌ಸಿಬಿ ಗೆದ್ದೆ ಗೆಲ್ಲುತ್ತದೇ. ಅದಕ್ಕೂ ಮೊದಲೇ ದೇವರಿಗೆ ಪ್ರಾರ್ಥಿಸಿ ಟೆಂಗಿನಕಾಯಿ ಒಡೆದಿದ್ದೇವೆ ಎಂದು ಅಭಿಮಾನಿಗಳು ಸಂಭ್ರಮಿಸಿದರು.
ಇನ್ನು ಮಹಾಲಿಂಗಪುರದ ಖಾಸಗಿ ಶಾಲೆಯ ಚಿತ್ರಕಲಾ ಶಿಕ್ಷಕ ಶಿವಾನಂದ ಎನ್ನುವ ಕ್ರಿಕೆಟ್ ಅಭಿಮಾನಿ, ರಕ್ತದಲ್ಲಿ ವಿರಾಟ್ ಕೊಹ್ಲಿ ಅವರ ಭಾವಚಿತ್ರ ಬಿಡಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ. ರನ್ನ ಬೆಳಗಲಿ ಗ್ರಾಮದ ಶಿವಾನಂದ ಅವರು ಕೊಹ್ಲಿ ಅವರ ಅಪ್ಪಟ ಅಭಿಮಾನಿಯಾಗಿದ್ದು, ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲಬೇಕು, ವಿರಾಟ್ ಕೊಹ್ಲಿ ಮಿಂಚಬೇಕು ಎನ್ನುವ ಆಶಯದಿಂದ ರಕ್ತದಲ್ಲಿ ಚಿತ್ರಬಿಡಿಸಿದ್ದಾರೆ.