ತೋಟದ ಮನೆಗಳೇ ಡಾಬಾ! ; ಕುಣಿಗಲ್ ತಾಲೂಕಿನ ಹಳ್ಳಿಗಳಲ್ಲಿ ರಾಜಕೀಯ ತಾಲೀಮು

9kunigal2
Published on

ಕುಣಿಗಲ್: ಗ್ರಾಮಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆ ಚುರುಕಾಗಿದ್ದು,

ಶತಾಯಗತಾಯ ಗ್ರಾಪಂ ಸದಸ್ಯನಾಗಲೇಬೇಕೆಂಬ ಹಠಕ್ಕೆಬಿದ್ದಿರುವ ಮಹತ್ವಾಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ.

ಚುನಾವಣೆ ನೆಪದಲ್ಲಿ ಗ್ರಾಮಗಳಲ್ಲಿ ಶಕ್ತಿ ವೃದ್ಧಿಸಿಕೊಳ್ಳುವ ರಾಜಕೀಯ ಚಾಣಾಕ್ಷ ನಡೆಯನ್ನು ವಿಧಾನಸಭಾ ಚುನಾವಣೆ ಆಕಾಂಕ್ಷಿಗಳು ಮಾಡುತ್ತಿದ್ದು, ಗ್ರಾಮಗಳಲ್ಲಿ ಅಡ್ಡಾಡಿ ಸಂಘಟನೆಗೆ ತೊಡಗಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಕ್ಷೇತ್ರದಲ್ಲಿ ಪ್ರಬಲವಾಗಿವೆ. ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಡಾ.ಎಚ್.ಡಿ.ರಂಗನಾಥ್ ಗ್ರಾಪಂ ಅಖಾಡಕ್ಕಿಳಿದಿದ್ದು, ಇತ್ತೀಚೆಗೆ ಜಿಪಂ ಸದಸ್ಯೆ ಅನಸೂಯಮ್ಮ ಅವರ ತೋಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ರಣಕಹಳೆ ಮೊಳಗಿಸಿದ್ದಾರೆ. ಜತೆಗೆ ಹಳೆಯ ಕಾಂಗ್ರೆಸ್ಸಿಗರು ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ ನೇತೃತ್ವದಲ್ಲಿ ಸ್ಪರ್ಧಿಸಲು ಸಭೆ ನಡೆಸುತ್ತಿರುವುದು ಕಾಂಗ್ರೆಸ್‌ನಲ್ಲಿ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚಿಸಿದೆ.

ಮುಖಂಡ ಡಿ.ಕೃಷ್ಣಕುಮಾರ್ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಸ್.ಬಲರಾಮ್ ನೇತೃತ್ವದಲ್ಲಿ ಬಿಜೆಪಿ ಚುನಾವಣೆಯ ತಾಲೀಮು ನಡೆಸುತ್ತಿದೆ. ಸತತ ಮೂರು ವಿಧಾನಸಭೆ ಸೋಲಿನಿಂದ ಕಂಗಾಲಾಗಿರುವ ಬಿಜೆಪಿ ಗ್ರಾಮೀಣ ಭಾಗದಲ್ಲಿ ಶಕ್ತಿ ವೃದ್ಧಿಸಿಕೊಳ್ಳಲು ಈ ಚುನಾವಣೆಯನ್ನು ಬಳಸಿಕೊಳ್ಳಲು ಮುಂದಾಗಿದೆ. ಕಾಂಗ್ರೆಸ್‌ಗೆ ಪೈಪೋಟಿ ನೀಡಲು ಕಾರ್ಯಕರ್ತರನ್ನು ಅಣಿಗೊಳಿಸುತ್ತಿದೆೆ.

ಮಾಜಿ ಶಾಸಕ ಡಿ.ನಾಗರಾಜಯ್ಯ, ಜಿಪಂ ಮಾಜಿ ಅಧ್ಯಕ್ಷ ಡಾ.ಬಿ.ಎನ್.ರವಿ ಹಾಗೂ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎನ್.ಜಗದೀಶ್ ನೇತೃತ್ವದಲ್ಲಿ ಚುನಾವಣೆಗೆ ಕಾರ್ಯಕರ್ತರನ್ನು ಜೆಡಿಎಸ್ ಸಜ್ಜುಗೊಳಿಸುತ್ತಿದೆೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿಯೂ ಸಭೆ ನಡೆಸಿ ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಇದ್ದ ಜೆಡಿಎಸ್ ಬಲವನ್ನು ಮರಳಿ ತರುವ ಪ್ರಯತ್ನ ನಡೆದಿದೆ. ಪ್ರಮುಖ ಮೂರೂ ಪಕ್ಷದವರು ಗ್ರಾಮ ಪಂಚಾಯಿತಿ ಅಧಿಕಾರ ಹಿಡಿಯಲೇಬೇಕೆಂದು ಪೈಪೋಟಿಗೆ ಬಿದ್ದಿರುವುದರಿಂದ ತಾಲೂಕಿನಲ್ಲಿ ಹಳ್ಳಿ ರಾಜಕೀಯ ಕಣಕ್ಕೆ ರಂಗೇರುತ್ತಿದೆ.

ಎಷ್ಟು ಮಂದಿ ಆಯ್ಕೆ?: ತಾಲೂಕಿನಲ್ಲಿ 36 ಗ್ರಾಪಂಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 496 ಸದಸಸ್ಯರು ಆಯ್ಕೆ ಆಗಲಿದ್ದಾರೆ. ಅನುಸೂಚಿತ ಜಾತಿ 26, ಮಹಿಳೆ 43, ಅನುಸೂಚಿತ ಪಂಗಡ ಮಹಿಳೆ 36, ಹಿಂದುಳಿದ ವರ್ಗ ಅ 34, ಮಹಿಳೆ 69, ಹಿಂದುಳಿದ ವರ್ಗ ಬ 24, ಮಹಿಳೆ 8, ಸಾಮಾನ್ಯ 158, ಮಹಿಳೆ 98 ಆಯ್ಕೆಯಾಗಬೇಕಾಗಿದೆ.

ಭರ್ಜರಿ ಬಾಡೂಟ, ಮದ್ಯ: ತಾಲೂಕಿನ ಎಲ್ಲ ಡಾಬಾಗಳಲ್ಲಿ ಮದ್ಯ ಸೇವನೆ ನಿಷೇಧಿಸಲಾಗಿದೆ, ಅಬಕಾರಿ ಇಲಾಖೆ ದಾಳಿ ನಡೆಸುತ್ತಿರುವ ಕಾರಣ ಡಾಬಾಗಳಲ್ಲಿ ಗ್ರಾಪಂ ಚುನಾವಣೆ ಚರ್ಚೆ ವ್ಯಾಪಾರದ ಅರ್ಭಟ ಇಲ್ಲದೇ ಡಾಬಾ ಮಾಲೀಕರು ತಲೆ ಮೇಲೆ ಕೈಹೊತ್ತು ಕಳಿತುಕೊಳ್ಳುವಂತಾಗಿದೆ. ಈ ಸಂಬಂಧ ಆಕಾಂಕ್ಷಿಗಳು ತಮ್ಮ ತೋಟದ ಮನೆಗಳನ್ನೇ ಡಾಬಾಗಳಾಗಿ ಮಾಡಿಕೊಂಡು ಅಲ್ಲಿಯೇ ಭರ್ಜರಿ ಬಾಡೂಟ ಹಾಗೂ ಮದ್ಯ ಸೇವನೆಗೆ ವ್ಯವಸ್ಥೆ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಜನರಿಗೆ ತಿಳಿಸುವ ಮೂಲಕ ಗ್ರಾಪಂ ಚುನಾವಣೆ ನಡೆಸುತ್ತೇವೆ, ಎಲ್ಲ ಗ್ರಾಮಗಳಲ್ಲಿ ಉತ್ಸಾಹಿಗಳು ಬಿಜೆಪಿ ಬೆಂಬಲದಲ್ಲಿ ಸ್ಪರ್ಧೆಗೆ ಒಲವು ತೋರಿಸುತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಅಗತ್ಯವಾದ ಶಕ್ತಿಯನ್ನು ನಾವು ಈ ಗ್ರಾಪಂ ಚುನಾವಣೆಯಲ್ಲಿ ಪಡೆದುಕೊಳ್ಳಲಿದ್ದೇವೆ. ಡಿ.ಕೃಷ್ಣಕುಮಾರ್ ನೇತೃತ್ವದಲ್ಲಿ ಪಕ್ಷದ ಎಲ್ಲ ಮುಖಂಡರು ಕ್ಷೇತ್ರದೆಲ್ಲೆಡೆ ಪ್ರವಾಸ ನಡೆಸುತ್ತಿದ್ದಾರೆ. ಕೆ.ಎಸ್.ಬಲರಾಮ್ ಅಧ್ಯಕ್ಷ, ಬಿಜೆಪಿ ಕುಣಿಗಲ್ ಮಂಡಲ ಸಂಸದರು ಹಾಗೂ ಶಾಸಕರು ಇರುವ ಕಾರಣ ಕಾಂಗ್ರೆಸ್‌ನ ಅತಿ ಹೆಚ್ಚು ಕಾರ್ಯಕರ್ತರು ಸ್ಪರ್ಧೆ ಮಾಡಲು ಪೈಪೋಟಿಗೆ ಇಳಿದಿದ್ದಾರೆ. ಆದರೂ, ಅರ್ಹ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸಂಪೂರ್ಣವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಅಧಿಕಾರ ಹಿಡಿಯಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಂಘಟನೆ ಮಾಡಲಾಗುತ್ತಿದೆ. ರಂಗಣ್ಣಗೌಡ ಕುಣಿಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net