

ಚನ್ನಪಟ್ಟಣ: ಸಮಯ ಮುಗಿದಿದೆ ಎಂದು ಹಾಲು ಸ್ವೀಕರಿಸಲು ನಿರಾಕರಿಸಿದ ಡೇರಿ ಕಾರ್ಯದರ್ಶಿ ನಡೆಗೆ ಕೋಪಗೊಂಡ ರೈತರು ಹಾಲನ್ನು ಡೇರಿ ಬಾಗಿಲಿಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಹಾರೋಕೊಪ್ಪದಲ್ಲಿ ಗುರುವಾರ ಬೆಳಗ್ಗೆ 6.45ರ ನಂತರ ಹಾಲು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕಾರ್ಯದರ್ಶಿ ನಿರಾಕರಿಸಿದ್ದಾರೆ. ಇದರಿಂದ ಮಾತಿನ ಜಟಾಪಟಿ ನಡೆದು, 10ಕ್ಕೂ ಹೆಚ್ಚು ರೈತರು 100 ಲೀಟರ್ಗೂ ಅಧಿಕ ಹಾಲನ್ನು ಡೇರಿ ಬಾಗಿಲಿಗೆ ಸುರಿದಿದ್ದಾರೆ. ಹಿಂದಿನ ದಿನಗಳಲ್ಲಿ ರಾತ್ರಿ 7 ಗಂಟೆವರೆಗೂ ಹಾಲು ಸ್ವೀಕರಿಸಲಾಗುತ್ತಿತ್ತು. ಆದರೆ, ಇಂದು ಏಕಾಏಕಿ ಸಮಯದ ನೆಪ ಹೇಳಿ ಹಾಲು ಸ್ವೀಕರಿಸುತ್ತಿಲ್ಲ. ಹಾಲಿನ ವ್ಯಾನ್ ಇದ್ದರೂ ಹಾಲು ಸ್ವೀಕರಿಸದೆ ಅನ್ಯಾಯ ಮಾಡಲಾಗುತ್ತಿದೆ. ನಮ್ಮ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ ಎನ್ನುವುದು ಹಾಲು ಸುರಿದ ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಪತ್ರಿಕೆಗೆ ತಿಳಿಸಿರುವ ಸಂಘದ ಕಾರ್ಯದರ್ಶಿ ಪಿ.ಸಿದ್ದೇಗೌಡ, ಕೆಲ ಸದಸ್ಯರು ಸಮಯ ಮೀರಿ ಹಾಲು ತರುತ್ತಿದ್ದ ಕಾರಣ, ಸಾಗಾಣಿಕೆ ವೆಚ್ಚ ಹೆಚ್ಚುತ್ತಿತ್ತು. ಇದಕ್ಕೆ ಸಮಯ ಪಾಲಿಸುತ್ತಿದ್ದ ಇತರ ಸದಸ್ಯರು ಆಕ್ಷೇಪ ಎತ್ತಿದ್ದರು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿಗದಿತ ಸಮಯಪಾಲನೆ ಮಾಡಲು ತೀರ್ಮಾನ ಮಾಡಲಾಯಿತು. ಇಂದು ಕೂಡ ಕೆಲವರು ಹಾಲು ತರುವುದು ನಿಧಾನವಾಗಿದ್ದು, ಈ ಘಟನೆಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ.
ವಾರ್ಷಿಕ ಮಹಾಸಭೆ ಕಾರಣ
ಬುಧವಾರ ಸಂಘದ ವಾರ್ಷಿಕ ಮಹಾಸಭೆ ನಡೆದಿತ್ತು. ಈ ಸಭೆಯಲ್ಲಿ ಕೆಲ ರೈತರು ಸಂಘದ ಅವ್ಯವಹಾರ ಹಾಗೂ ಖರ್ಚು ವೆಚ್ಚದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಅಸಮಾಧಾನಗೊಂಡ ಕಾರ್ಯದರ್ಶಿ ಪಿ.ಸಿದ್ದೇಗೌಡ ಎಂಬುವವರು ಉದ್ದೇಶ ಪೂರ್ವಕವಾಗಿಯೇ ಹಾಲಿನ ವ್ಯಾನ್ ಬರಲು ಸಮಯವಿದ್ದರೂ ಸಮಯ ಮುಗಿದಿದೆ ಎಂದು ಹಾಲು ತೆಗೆದುಕೊಳ್ಳಲಿಲ್ಲ. ನಾವೇ ಹಾಲಿನ ವಾಹನದ ಖರ್ಚು ಭರಿಸುತ್ತೇವೆ ಎಂದರೂ, ಅವಕಾಶ ನೀಡಲಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಸಂಘದ ಬಾಗಿಲಲ್ಲಿ ರೈತರು ಹಾಲು ಸುರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.